ವಿವೇಕಾನಂದ ಜಯಂತಿ ಪ್ರಯುಕ್ತ ರಾಜ್ಯಾದ್ಯಂತ ಉತ್ತಮನಾಗು - ಉಪಕಾರಿಯಾಗು ಅಭಿಯಾನ ಕಾರ್ಯಕ್ರಮ

ಬೆಂಗಳೂರು, ಜ 8 ಸಮರ್ಥ ಭಾರತ ಸಂಘನೆಯಿಂದ ವಿವೇಕಾನಂದ ಜಯಂತಿ ಪ್ರಯುಕ್ತ ನೆಲ, ಜಲ ಸಂರಕ್ಷಣೆ, ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳುವ ಕುರಿತು ಜ. 12ರಿಂದ 26ರವರಿಗೆ ರಾಜ್ಯಾದ್ಯಂತ ಉತ್ತಮನಾಗು- ಉಪಕಾರಿಯಾಗು ಅಭಿಯಾನ ಆಯೋಜಿಸಲಾಗಿದೆ ಎಂದು ಸಮರ್ಥ ಭಾರತ ಟ್ರಸ್ಟ್ ನ ಟ್ರಸ್ಟಿ ರಾಜೇಶ್ ಪದ್ಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 12ರಂದು ಆರ್. ವಿ ಟೀಚರ್ಸ್ ಕಾಲೇಜಿನಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ, ಸಚಿವ ಸುರೇಶ್ ಕುಮಾರ್, ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಜ.12 ರಂದು ಬೆ.7ಕ್ಕೆ ಕಬ್ಬನ್ ಪಾರ್ಕ್ ನಲ್ಲಿ ವಾಕಥಾನ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ದೆ ಆಯೋಜಿಸಲಾಗಿದೆ. ಜಲ ಸಂರಕ್ಷಣೆ, ಆರೋಗ್ಯಕರ ಆಹಾರ ಪದ್ಧತಿ ಹಾಗೂ ಹಿರಿಯರನ್ನು ಗೌರವಿಸುವ ವಿಚಾರವಾಗಿ ಯುವಜನರಲ್ಲಿ ಜಾಗೃತಿ ಮೂಡಿಸಲು, ಯುವಜನರು ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಮರ್ಥ ಭಾರತ ಮನವಿ ಮಾಡಿದೆ. ಅದೇ ದಿನ ಮಿಥಿಕ್ ಸೊಸೈಟಿಯಲ್ಲಿ ರಾಷ್ಟ್ರದ ಅಭ್ಯುದಯದಲ್ಲಿ ಮಹಿಳೆಯರ ಪಾತ್ರ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಶಿಕ್ಷಣ ತಜ್ಞ ಪ್ರೊ. ಪಿ.ವಿ. ಕೃಷ್ಣ ಭಟ್, ತೇಜಸ್ವಿನಿ ಅನಂತ್ ಕುಮಾರ್ ಉಪಸ್ಥಿತರಿರಲಿದ್ದಾರೆ. 2 ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ 2 ಲಕ್ಷ ಯುವಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ರವಿಶಂಕರ್, ಡಾ. ಎ. ಕೆ. ರವಿ, ಡಾ. ಜಯಪ್ರಕಾಶ್, ದೇವಾನಂದ ಗದ್ದಾರ್ ಇದ್ದರು.