ವಿಜಯವಾಡ, ಫೆ 29 : ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿರುವ ಕುರಿತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖಂಡರ ತಂಡವೊಂದು ಶನಿವಾರ ಆಂಧ್ರಪ್ರದೇಶದ ರಾಜ್ಯಪಾಲ ಬಿಸ್ವಭೂಷನ್ ಹರಿಚಂದನ್ ಅವರನ್ನು ರಾಜ್‌ಭವನದಲ್ಲಿ ಭೇಟಿ ಮಾಡಿ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.
ಫೆ 27 ರಂದು ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಪಕ್ಷದ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ಹಾಗೂ ಮದುವೆಯೊಂದರಲ್ಲಿ ಪಾಲ್ಗೊಳ್ಳಲು ವಿಶಾಖಪಟ್ಟಣಂಗೆ ತೆರಳಿದ್ದಾರೆ. ಅವರ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅಧಿಕಾರಿಗಳಿಂದ ಟಿಡಿಪಿ ಅನುಮತಿ ಪಡೆದಿತ್ತು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಆದರೂ, ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ, ಚಂದ್ರಬಾಬು ನಾಯ್ಡು ಅವರ ಮೇಲೆ ದಾಳಿ ಮಾಡಲು ಸಮಾಜ ಘಾತುಕ ಶಕ್ತಿಗಳನ್ನು ಸಜ್ಜುಗೊಳಿಸಿತ್ತು ಎಂದು ಅವರು ಆರೋಪಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್ಎಸ್ ಜಿ) ಕಮಾಂಡೋಗಳು ನಾಯ್ಡು ಅವರಿಗೆ ವಿಮಾನ ನಿಲ್ದಾಣದಲ್ಲಿ ತಮ್ಮ ಗುಂಡು ನಿರೋಧಕ ರಕ್ಷಾ ಕವಚಗಳೊಂದಿಗೆ ರಕ್ಷಣೆ ನೀಡಿದ್ದಾರೆ.
ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳಲ್ಲಿ ತೊಡಗಿದೆ. ದ್ವೇಷ ಮತ್ತು ಪ್ರತೀಕಾರದ ರಾಜಕೀಯ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಟಿಡಿಪಿ ಆರೋಪಿಸಿದೆ.
ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಪುನರ್ ಸ್ಥಾಪಿಸಲು ಮಧ್ಯಪ್ರವೇಶಿಸುವಂತೆ ಟಿಡಿಪಿ ನಿಯೋಗ ರಾಜ್ಯಪಾಲರಲ್ಲಿ ಮನವಿ ಮಾಡಿದೆ.