ಧಾರವಾಡ 10: ಸಂಶೋಧಕ ವಿದ್ಯಾರ್ಥಿಗಳಿಗೆ ದೂರದೃಷ್ಟಿ ಮುಖ್ಯ. ಸಂಶೋಧನೆಯಲ್ಲಿ ನಿರತರಾದಾಗ ತಮ್ಮ ಗಮನವನ್ನು ಕೇಂದ್ರಿಕರಿಸಿ ಸಂಶೋಧನೆ ಮಾಡಬೇಕೆಂದು ಮನೋರೋಗ ವೈದ್ಯರಾದ ಡಾ. ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಎಸ್.ಪಿ. ಹಿರೇಮಠ ಸ್ಮರಣೆಯ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಯುವ ವಿಜ್ಞಾನಿ’ ಪ್ರಶಸ್ತಿ ಪ್ರದಾನ ಸಮಾರಂಭದ ಅತಿಥಿಯಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಸಂಶೋಧನೆ ವಿದ್ಯಾರ್ಥಿಗಳಿಗೆ ಬದ್ಧತೆ ಮುಖ್ಯ. ಸಂಶೋಧನೆಯಲ್ಲಿ ತೊಡಗಿದಾಗ ಸಾಧಿಸುತ್ತೇನೆಂಬ ಛಲವಿರಬೇಕು. ನಿರಂತರ ಪ್ರಯತ್ನದಿಂದ ಎಂತಹ ಸಾಧನೆಯನ್ನಾದರೂ ತಾವು ಮಾಡಬಹುದು. ಈ ಪ್ರಶಸ್ತಿ ಫಲಾನುಭವಿಗಳಲ್ಲಿ ಜವಾಬ್ದಾರಿ ಹೆಚ್ಚಿಸುತ್ತಿದೆ. ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ತಮ್ಮ ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ನಮ್ರತಾ ಸಿನ್ನೂರಗೆ ಉಜ್ವಲ ಭವಿಷ್ಯವಿದೆ. ಈ ವಿದ್ಯಾರ್ಥಿ ನಾಡಿನ ಹೆಮ್ಮೆಯ ವಿಜ್ಞಾನಿಯಾಗಲಿ ಎಂದು ಶುಭಕೋರಿ ಪ್ರೊ. ಎಸ್.ಪಿ. ಹಿರೇಮಠ ಒಬ್ಬ ಸರ್ವಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದಲ್ಲದೇ ಖ್ಯಾತ ಸಂಶೋಧಕರೂ ಆಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಭಾರತಕ್ಕಿಂತ ವಿದೇಶಗಳಲ್ಲೇ ಹೆಚ್ಚು ಸಂಶೋಧಕರಿರುವುದರಿಂದ ಆ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ದೇಶಗಳಾಗಿವೆ. ದೇಶದ ಅಭಿವೃದ್ಧಿಯಲ್ಲಿ ಸಂಶೋಧಕರ ಪಾತ್ರ ಹಿರಿದಾಗಿದೆ. ಯುವ ವಿಜ್ಞಾನಿ ಪ್ರಶಸ್ತಿಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಕೊಡಮಾಡಬೇಕು. ಸಂಶೋಧಕ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿದಲ್ಲಿ ಭಾರತದ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಯುವ ವಿಜ್ಞಾನಿಗಳು ಗ್ರಾಮೀಣ ಜನಸಮುದಾಯದಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುವ ಗುರಿ ಹೊಂದಲಿ ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ರಸಾಯನ ಶಾಸ್ತ್ರದ ವಿದ್ಯಾರ್ಥಿನಿ ಕು. ನಮ್ರತಾ ಸಿನ್ನೂರ ‘ಯುವ ವಿಜ್ಞಾನಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದ್ದು, ಇನ್ನೂ ಹೆಚ್ಚಿನ ಸಂಶೋಧನೆಗೆ ಉತ್ಸುಕಳನ್ನಾಗಿ ಮಾಡಿದೆ. ಪ್ರಶಸ್ತಿ ನೀಡಿ ಗೌರವಿಸಿದ ಎಲ್ಲರಿಗೂ, ಕುಟುಂಬದವರಿಗೆ, ನನ್ನ ಗುರುಗಳಿಗೆ ನಾನು ಅಭಿನಂದಿಸುತ್ತೇನೆ ಎಂದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಕೆ.ಎಂ. ಅಂಗಡಿ, ಮಹಾಂತೇಶ ನರೇಗಲ್ ಸೇರಿದಂತೆ ಮುಂತಾದವರಿದ್ದರು.