ವಿಷ್ಣು ಶಿಂದೆ ಅವರ ಮಣ್ಣಿನ ಮಾಯೆ ಕೃತಿ ಲೋಕಾರೆ​‍್ಣ; ಸಾಹಿತಿ ಸಮಾಜವನ್ನು ಒಗ್ಗೂಡಿಸಬೇಕು - ಸತ್ಯಾನಂದ ಪಾತ್ರೋಟ

ವಿಷ್ಣು ಶಿಂದೆ ಅವರ ಮಣ್ಣಿನ ಮಾಯೆ ಕೃತಿ ಲೋಕಾರೆ​‍್ಣ;  ಸಾಹಿತಿ ಸಮಾಜವನ್ನು ಒಗ್ಗೂಡಿಸಬೇಕು - ಸತ್ಯಾನಂದ ಪಾತ್ರೋಟ Vishnu Shinde's Mudal Maya is a work of world-class literature; the literary community should be uni

ಬೆಳಗಾವಿ 15 : ಬರಹಗಾರರ ಜಾತಿ, ಧರ್ಮ, ಲಿಂಗತ್ವ ತಾರತಮ್ಯದ ಮಿತಿಗಳನ್ನು ಮೀರಿ ಮನುಷ್ಯತ್ವದ ಪರವಾಗಿ ಬರೆಯಬೇಕು, ಸಾಹಿತಿ ಸಮಾಜವನ್ನು ಒಗ್ಗೂಡಿಸಬೇಕು, ವಿಭಜಿಸಬಾರದು ಎಂದು ನಾಡಿನ ಖ್ಯಾತ ಕವಿ, ಸಾಂಸ್ಕೃತಿಕ ಚಿಂತಕ  ಸತ್ಯಾನಂದ ಪಾತ್ರೋಟ ಹೇಳಿದರು. ಅವರಿಂದು ನಗರದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಭಾ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ, ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವಿಷ್ಣು ಶಿಂದೆ ಅವರ "ಮಣ್ಣಿನ ಮಾಯೆ" ಕಥಾ ಸಂಕಲನ   ಲೋಕಾರೆ​‍್ಣಗೊಳಿಸಿ ಅವರು ಮಾತನಾಡಿದರು.  

ಪಂಪ ರಾಜಾಶ್ರಯದಲ್ಲಿದ್ದರೂ ಪ್ರಭುತ್ವ, ಸಾಮಾಜಿಕ, ಧಾರ್ಮಿಕ ಮಿತಿಗಳನ್ನು ದಾಟಿ ಮನುಷ್ಯತ್ವದ ಪರವಾಗಿ ನಿಂತಿರುವುದು ಮಾದರಿಯಾಗಬೇಕು. ಭಾರತೀಯ ಬಹುತ್ವದೊಂದಿಗೆ ಸಮಕಾಲೀನತೆ ಮುಖಾಮುಖಿಯಾಗಿಸಿ ಬದ್ಧತೆ ಕಾಯ್ದುಕೊಳ್ಳಬೇಕು. ಲೇಖಕರಿಗೆ ಸಾಮಾಜಿಕ ಬದ್ಧತೆ ಅತಿ ಮುಖ್ಯವಾಗಬೇಕು. ಕೃಷ್ಞಾ ನದಿ ತೀರದ ಬದುಕಿನ ಸಂವೇದನೆಗಳಿಂದ ಕೂಡಿದ ವಿಷ್ಣು ಶಿಂದೆ ಅವರ ಕತೆಗಳು ಬಹುತ್ವ ಸಂಸ್ಕೃತಿಯನ್ನು ಪ್ರತಿಪಾದಿಸುತ್ತವೆ ಎಂದು ವಿಶ್ಲೇಷಿಸಿದರು.   

  ಮುಖ್ಯ ಅತಿಥಿ, ರಾಯಣ್ಣ ಗೋಗ್ರೀನ್ ಫೌಂಡೇಶನ್ ಅಧ್ಯಕ್ಷ ಸದಾಶಿವ ದೇಶಿಂಗೆ ಮಾತನಾಡಿ, ಮನುಷ್ಯ ಕುಲ ಸೇರಿದಂತೆ ಜೀವ ಪ್ರೀತಿಯ ಸಂಬಂಧಗಳ ಹೊಸ ಹೊಸ ಸಂಗತಿಗಳನ್ನು ಸಮಾಜಕ್ಕೆ ತೋರಿಸಿ, ಮನುಷ್ಯ ಬದಕಿನ ಘನತೆಯನ್ನು ಎತ್ತರಿಸಬೇಕು. ವಿಷ್ಣು ಶಿಂದೆ ಅವರು ತಮ್ಮ ಕಥಾ ಸಂಕಲನದಲ್ಲಿ ಪ್ರಾಣಿ ಪಾತ್ರಗಳನ್ನು ಸೃಷ್ಟಿಸಿ ಜೀವ ಸಂಬಂಧದ ಅಗತ್ಯವನ್ನು ಉನ್ನತೀಕರಿಸಿದ್ದಾರೆ. ಗಳಿಸಿದ ಸಂಪತ್ತು ಮರೆಯಾಗಬಹುದು ಸೃಷ್ಟಿಸಿದ ಜೀವಪರ ಸಾಹಿತ್ಯ ಚಿರಂತನವಾಗಿರುತ್ತದೆ ಎಂದು ಹೇಳಿದರು. ಕತೆಗಾರ, ವಿಮರ್ಶಕ ಲಿಂಗರಾಜ ಸೊಟ್ಟಪ್ಪನವರ್ ಕೃತಿ ಕುರಿತು ಮಾತನಾಡಿದರು.     

    ಲೇಖಕ ವಿಷ್ಣು ಶಿಂದೆ ಮಾತನಾಡಿ, ನನಗೆ ನನ್ನ ಬಾಲ್ಯದ ಮಣ್ಣಿನ ಬದುಕು ಈಗಲೂ ಹಸಿರಾಗಿದೆ. ಗ್ರಾಮ ಜೀವನದ ಅನುಭವ ಉತ್ಕೃಷ್ಟವಾಗಿದ್ದರೆ ಮನುಷ್ಯ ಎಂದಿಗೂ ಭಾವನೆಗಳ ಬದುಕಿನಿಂದ ವಂಚಿತವಾಗುವುದಿಲ್ಲ. ನನ್ನ ಎಲ್ಲ ಕಥೆಗಳ ಸತ್ವ ಕೃಷ್ಣಾ ತೀರದ ಮಣ್ಣಿನ ಸತ್ವವಾಗಿದೆ ಎಂದು ಅನುಭವ ಹಂಚಿಕೊಂಡರು.ಸಮಾರಂಭದ ಅಧ್ಯಕ್ಷತೆ ವಹಿಸಿದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ, ಯಲ್ಲಪ್ಪ ಹಿಮ್ಮಡಿ ಅವರು, ನಾವಿರುವ ನೆಲದ ಬದುಕನ್ನು ಮಾನವೀಯ ಕರುಳಿನಿಂದ ನೋಡಿದಾಗ ಇಂತಹ ಸದಭಿರುಚಿಯ ಕಥೆಗಳು ನಮ್ಮ ನಡುವೆ ಹುಟ್ಟು ಪಡೆಯುತ್ತವೆ. ಈ ದೃಷ್ಟಿಯಿಂದ ವಿಷ್ಣು ಶಿಂದೆ ಒಬ್ಬ ಗಟ್ಟಿ ಕಥೆಗಾರರಾಗಿ ಗಮನ ಸೆಳೆಯುತ್ತಾರೆ ಎಂದು ಹೇಳಿದರು.  

 ಶ್ರೀಧರ ಕಿಳ್ಳಿಖೇತರ, ಕೃಷ್ಣಾ ಘೋರೆ​‍್ಡ,  ಕೆ. ಆರ್‌. ಸಿದ್ಧಗಂಗಮ್ಮ , ಹಮೀದಾಬೇಗಂ ದೇಸಾಯಿ, ಸುವರ್ಣಾ ಘೋರೆ​‍್ಡ, ಮಚೆಂದ್ರ ಶಿಂಧೆ, ರಾಮಕೃಷ್ಣ ಮರಾಠೆ, ಸುಬ್ಬರಾವ್ ಎಂಟೆತ್ತಿನವರ, ಕೆ. ಎನ್‌. ದೊಡ್ಡಮನಿ, ಪ್ರೊ. ಮಾರುತಿ ಬುದ್ಯಾಳ,  ರವಿ ಕೋಟಾರಗಸ್ತಿ, ರಾಮನಾಥ ಬನಶಂಕರಿ, ಶಂಕರ ಕೊಡತೆ, ಹನುಮಂತ ಮದಾಳೆ, ಸುಭಾಷ ಪಾಟೀಲ, ಶಶಿಕಾಂತ ಕಂಬನ್ನವರ, ರಾಜು ಬೆಂಡೆ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಸರಸ್ವತಿ ಅಲಖನೂರೆ, ಸಿದ್ದು ಕೊಟ್ರೆ ವಚನಗಾಯನ ಮಾಡಿದರು. ಕವಿ ನದೀಮ್ ಸನದಿ ಸ್ವಾಗತಿಸಿದರು. ಶಶಿಕಾಂತ ತಾರದಾಳೆ ಪರಿಚಯಿಸಿದರು. ಸಂಜಯ ತೇಳೆ ವಂದಿಸಿದರು. ಜಗನಾಥ ಘೇನಣ್ಣವರ ಕಾರ್ಯಕ್ರಮ ನಿರೂಪಿಸಿದರು.