ಆನ್‌ ಫೀಲ್ಡ್‌ ಅಂಪೈರ್‌ ವಿರುದ್ಧ ವಿರಾಟ್‌ ಕೊಹ್ಲಿ ಗರಂ

ಚೆನ್ನೈ, ಡಿ 16, ಭಾನವಾರ ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಹಾಗೂ ವೆಸ್ಟ್ ಇಂಡೀಸ್‌ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಆನ್‌ ಫೀಲ್ಡ್ ಅಂಪೈರ್ ಮೇಲೆ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಗರಂ ಆಗಿದ್ದ ಘಟನೆ ಜರುಗಿತ್ತು.ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಿಗೆ ಎಂಟು ವಿಕೆಟ್‌ ನಷ್ಟಕ್ಕೆ 287 ರನ್ ಕಲೆ ಹಾಕಿತ್ತು. ನಂತರ ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್‌ 47.5 ಓವರ್ ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿ ಗೆಲುವಿನ ನಗೆ ಬೀರಿತ್ತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ವಿಂಡೀಸ್‌ ಬೌಲರ್‌ಗಳ ಶಿಸ್ತಿನ ಬೌಲಿಂಗ್‌ ದಾಳಿ ಎದುರು ಹೆಚ್ಚೇನು ಅಬ್ಬರಿಸಲಾಗದೆ ತಿಣುಕಾಡುತ್ತಲೇ ರನ್‌ ಹೆಕ್ಕುತ್ತಿತ್ತು. ಈ ಸಂದರ್ಭದಲ್ಲಿ ಆಲ್‌ರೌಂಡರ್‌ ರವೀಂದ್ರ ಜಡೇಜಾ ರನ್‌ಔಟ್‌ ಆದರು.ಇನಿಂಗ್ಸ್‌ನ 48ನೇ ಓವರ್‌ನಲ್ಲಿ ನಡೆದ ಘಟನೆ ಇದು. ಚುರುಕಿನ ಸಿಂಗಲ್‌ ರನ್‌ ಕದಿಯಲು  ಯತ್ನಿಸಿದ ಜಡೇಜಾ ಅವರನ್ನು ವೆಸ್ಟ್‌ ಇಂಡೀಸ್‌ನ ಫೀಲ್ಡರ್‌ ರೋಸ್ಟನ್‌ ಚೇಸ್‌ ನೇರವಾಗಿ ವಿಕೆಟ್‌ಗೆ ಚೆಂಡನ್ನು ಹಿಟ್‌ ಮಾಡುವ ಮೂಲಕ ಔಟ್‌ಗಾಗಿ ಮನವಿ ಮಾಡಿದರು. ಜಡೇಜಾ ಕ್ರೀಸ್‌ ತಲುಪದೇ ಇದ್ದರೂ ಆನ್‌ಫೀಲ್ಡ್‌ ಅಂಪೈರ್‌ ದಕ್ಷಿಣ ಆಫ್ರಿಕಾ ಮೂಲದ ಶಾನ್‌ ಜಾರ್ಜ್‌ ನಾಟ್‌ ಔಟ್‌ ನಿರ್ಧಾರ ನೀಡಿದ್ದರು.ಈ ಸಂದರ್ಭದಲ್ಲಿ ವೆಸ್ಟ್‌ ಇಂಡೀಸ್‌ ತಂಡ ಇನ್ನೇನು ಡಿಆರ್‌ಎಸ್‌ ಮನವಿ ಸಲ್ಲಿ  ಸಲ್ಲೂ ಇಲ್ಲ. ನಿರ್ಧಾರ ಪ್ರಕಟವಾಗಿ ಬಾಲ್‌ ಡೆಡ್‌ ಆಗಿದ್ದ ಸಂದರ್ಭದಲ್ಲಿ ವಿಂಡೀಸ್‌ ಆಟಗಾರರ ನಿರಂತರ ಮನವಿ ಮೇರೆಗೆ ಟೆಲಿವಿಷನ್‌ ರೀಪ್ಲೇ ಕಂಡು ತಮ್ಮ ತಪ್ಪಿನ ಅರಿವಾದ ಬಳಿಕ ಅಂಪೈರ್‌ ಥರ್ಡ್‌ ಅಂಪೈರ್‌ ಮೊರೆ ಹೋದರು.ಈ ಸಂದರ್ಭದಲ್ಲಿ ಅಂಪೈರ್‌ಗಳ ಈ ಎಡವಟ್ಟು ಕಂಡು ಕೆಂಡಾಮಂಡಲಗೊಂಡ  ನಾಯಕ ಕೊಹ್ಲಿ ಬೌಂಡರಿ ಗೆರೆ ಬಳಿಬಂದು ತಮ್ಮ ಕೋಪ ತಾಪಗಳನ್ನು ಹೊರಹಾಕಿದರು. ಆದರೆ, ಕೊಹ್ಲಿ ಫೀಲ್ಡ್‌ ಒಳಗೆ ಪ್ರವೇಶಿಸಲಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರ ಭಾರಿ ಚರ್ಚೆಯಾಗಿ ಚೆಂಡು ಡೆಡ್‌ ಆದ ಬಳಿಕ 3ನೇ ಅಂಪೈರ್‌ ನಿರ್ಧಾರ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಕೊಹ್ಲಿ ಕೋಪಕ್ಕೂ ಇದೇ ಕಾರಣವಾಗಿತ್ತು.ಇನಿಂಗ್ಸ್‌ನ ಅಂತಿಮ ಓವರ್‌ಗಳಲ್ಲಿ ಭಾರತ ತಂಡಕ್ಕೆ ಆಸರೆಯಾಗಿದ್ದ ಜಡೇಜಾ 21 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಅವರೊಟ್ಟಿಗೆ ಚುರುಕಿನ ಆಟವಾಡಿದ ಕೇದಾರ್‌ ಜಾಧವ್‌ 35 ಎಸೆತಗಳಲ್ಲಿ 40 ರನ್‌ ಗಳಿಸಿ ತಂಡಕ್ಕೆ ಸವಾಲಿನ ಮೊತ್ತ ತಂದುಕೊಟ್ಟರು. 25ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ಭಾರತ ತಂಡ ಅಂತಿಮವಾಗಿ 50 ಓವರ್‌ಗಳಲ್ಲಿ 287/8 ರನ್‌ಗಳನ್ನು ಗಳಿಸಿತ್ತು.