ವಿರಾಟ್ ಕೊಹ್ಲಿ ದಾಖಲೆಯ ಶತಕ: ಭಾರತಕ್ಕೆ ಭರ್ಜರಿ ಜಯ

ಟ್ರಿನಿಡಾಡ್, ಆ 12     ನಾಯಕ ವಿರಾಟ್ ಕೊಹ್ಲಿ (120 ರನ್, 125 ಎಸೆತಗಳು) ಅವರ ವೃತ್ತಿ ಜೀವನದ 42ನೇ ಶತಕದ ನೆರವಿನಿಂದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 59 ರನ್ಗಳಿಂದ (ಡಿಎಲ್ಎಸ್ ನಿಯಮ) ಜಯ ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.    ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ ಪಾರಮ್ಯ ಮೆರೆದರೆ, ಬೌಲಿಂಗ್ನಲ್ಲಿ ಭುವನೇಶ್ವರ್ ಕುಮಾರ್(31 ಕ್ಕೆ 4) ಅವರ ಶಿಸ್ತಿನ ದಾಳಿಯು ಕೂಡ ಭಾರತದ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿತು. ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ಗಳಿಗೆ ಏಳು ವಿಕೆಟ್ ನಷ್ಟಕ್ಕೆ 279 ರನ್ ದಾಖಲಿಸಿತು. ಬಳಿಕ ಎರಡನೇ ಇನಿಂಗ್ಸ್ಗೆ ಮಳೆ ಅಡ್ಡಿ ಮಾಡಿದ್ದರಿಂದ ಡಿಎಲ್ಎಸ್ ನಿಯಮದ ಅನುಸಾರ ವೆಸ್ಟ್ ಇಂಡೀಸ್ಗೆ 46 ಓವರ್ಗಳಿಗೆ 270 ರನ್ ಗುರಿ ನೀಡಲಾಗಿತ್ತು. ಗುರಿ ಹಿಂಬಾಲಿಸಿದ್ದ ವೆಸ್ಟ್ ಇಂಡೀಸ್ 42 ಓವರ್ಗಳಿಗೆ 210 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲು ಒಪ್ಪಿಕೊಂಡಿತು.  ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಭಾರತಕ್ಕೆ ಆರಂಭದಲ್ಲೇ ಆಘಾತವಾಗಿತ್ತು. ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ (2 ರನ್) ಅವರು ಶೆಲ್ಡನ್ ಕಾಟ್ರೆಲ್ ಅವರ ಬೌಲಿಂಗ್ನಲ್ಲಿ ವಿವಾದಾತ್ಮಕ ಎಲ್ಬಿಡಬ್ಲ್ಯುಗೆ ಬಲಿಯಾದರು. ನಂತರ ಜತೆಯಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೋಡಿಯು ಮುರಿಯದ ಎರಡನೇ ವಿಕೆಟ್ಗೆ 74 ರನ್ ಗಳಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. 34 ಎಸೆತಗಳಲ್ಲಿ 18 ರನ್ ಗಳಿಸಿದ ರೋಹಿತ್ ಶರ್ಮಾ ರೋಸ್ಟನ್ ಚೆಸ್ಗೆ ಔಟ್ ಆದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ರಿಷಭ್ ಪಂತ್ 20 ರನ್ಗಳಿಗೆ ಸೀಮಿತರಾದರು. ಕೊಹ್ಲಿ-ಅಯ್ಯರ್ ಜುಗಲ್ಬಂದಿ:  ತಂಡದ ಮೊತ್ತ 101 ರನ್ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜತೆಯಾದ ವಿರಾಟ್ ಹಾಗೂ ಶ್ರೇಯಸ್ ಅಯ್ಯರ್ ಜೋಡಿ ಅಮೋಘ ಬ್ಯಾಟಿಂಗ್ ಮಾಡಿತು. ವಿಂಡೀಸ್ ಬೌಲರ್ಗಳನ್ನು ಸೊಗಸಾಗಿ ಎದುರಿಸಿದ ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್ಗೆ 125 ಜತೆಯಾಟವಾಡಿತು. ಆ ಮೂಲಕ ತಂಡದ ಮೊತ್ತ 200ರ ಗಡಿ ದಾಟಲು ಸಾಧ್ಯವಾಯಿತು.  ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ 70 ಅಥವಾ 80 ರ ಆಸುಪಾಸಿನಲ್ಲಿ ವಿಕೆಟ್ ನೀಡಿದ್ದ ನಾಯಕ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಬಹಳ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. 125 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸ್ ಹಾಗೂ 14 ಬೌಂಡರಿಯೊಂದಿಗೆ 120 ರನ್ಗಳಿಸಿ ವೃತ್ತಿ ಜೀವನದ 42ನೇ ಶತಕ ಪೂರೈಸಿದರು. ಮಧ್ಯಮ ಕ್ರಮಾಂಕದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಅವರು ನಾಯಕ ವಿರಾಟ್ ಕೊಹ್ಲಿಗೆ ಹೆಚ್ಚು ಹೊತ್ತು ಸಾಥ್ ನೀಡಿದರು. 68 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸ್ ಹಾಗೂ ಐದು ಬೌಂಡರಿಯೊಂದಿಗೆ 71 ರನ್ ಗಳಿಸಿದರು. ನಂತರ, ಜೇಸನ್ ಹೋಲ್ಡರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.  ಅಂತಿಮವಾಗಿ ಭಾರತ ನಿಗದಿತ 50 ಓವರ್ಗಳಿಗೆ ಏಳು ವಿಕೆಟ್ ನಷ್ಟಕ್ಕೆ 279 ರನ್ ದಾಖಲಿಸಿತು. ಬಳಿಕ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿದ್ದರಿಂದ ವೆಸ್ಟ್ ಇಂಡೀಸ್ಗೆ 46 ಓವರ್ಗಳಲ್ಲಿ 270 ರನ್ ಗುರಿ ನೀಡಲಾಯಿತು. ಗುರಿ ಹಿಂಬಾಲಿಸಿದ ವೆಸ್ಟ್ ಇಡೀಸ್ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಕ್ರಿಸ್ ಗೇಲ್ ಹಾಗೂ ಎವಿನ್ ಲೆವಿಸ್ ಜೋಡಿ ಮೊದಲನೇ ವಿಕೆಟ್ಗೆ 45 ರನ್ ಗಳಿಸಿತು. ಗೇಲ್ ಈ ಪಂದ್ಯದಲ್ಲೂ 11 ರನ್ ಗಳಿಸಿ ವಿಫಲರಾದರು. ಭರವಸೆಯ ಬ್ಯಾಟ್ಸ್ಮನ್ ಶಾಯ್ ಹೋಪ್ ಕೇವಲ ಐದು ರನ್ ಗಳಿಸಿ ಖಲೀಲ್ ಅಹಮದ್ಗೆ ಕ್ಲೀನ್ ಬೌಲ್ಡ್ ಆದರು. ಶಿಮ್ರಾನ್ ಹೆಟ್ಮೇರ್ 18 ರನ್ ಗಳಿಗೆ ಸೀಮಿತರಾದರು. ಅಮೋಘ ಬ್ಯಾಟಿಂಗ್ ಮಾಡಿದ ಎವಿನ್ ಲೆವಿಸ್ ಭಾರತದ ಬೌಲರ್ಗಳನ್ನು ಹೆಚ್ಚು ಹೊತ್ತು ಕಾಡಿದರು. 80 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸ್ ಹಾಗೂ ಎಂಟು ಬೌಂಡರಿಯೊಂದಿಗೆ 65 ರನ್ ಗಳಿಸಿದರು. ಬಳಿಕ ಅವರು ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ಶರಣಾದರು.  ಇವರನ್ನು ಬಿಟ್ಟರೆ, ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ 42 ರನ್ ಗಳಿಸಿದರು. ಇನ್ನುಳಿದ ಬ್ಯಾಟ್ಸ್ಮನ್ಗಳು ಭಾರತದ ಬೌಲಿಂಗ್ ದಾಳಿ ಎದುರಿಸುವಲ್ಲಿ ವಿಫಲರಾದರು. ಒಟ್ಟಾರೆ, 42 ಓವರ್ಗಳಿಗೆ 210 ರನ್ ಗಳಿಗೆ ಸರ್ವ ಪತನವಾಗುವ ಮೂಲಕ ಸೋಲು ಒಪ್ಪಿಕೊಂಡಿತು. ಭಾರತದ ಭುವನೇಶ್ವರ್ ಕುಮಾರ್ ನಾಲ್ಕು, ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ಭಾರತ: 279 ವಿರಾಟ್ ಕೊಹ್ಲಿ-120 ಶ್ರೇಯಸ್ ಅಯ್ಯರ್-71 ರೋಹಿತ್ ಶರ್ಮಾ-18 ರವೀಂದ್ರ ಜಡೇಜಾ-16* ಬೌಲಿಂಗ್: ಕಾರ್ಲೊಸ್ ಬ್ರಾಥ್ವೇಟ್ 53 ಕ್ಕೆ 3, ರೋಸ್ಟನ್ ಚೇಸ್ 37 ಕ್ಕೆ 1, ಶೆಲ್ಡನ್ ಕಾಟ್ರೆಲ್-49 ಕ್ಕೆ 1 ವೆಸ್ಟ್ ಇಂಡೀಸ್: 210 (42) ಎವಿನ್ ಲೆವಿಸ್-65 ನಿಕೋಲಸ್ ಪೂರನ್-42 ರೋಸ್ಟನ್ ಚೇಸ್-18 ಶೆಲ್ಡನ್ ಕಾಟ್ರೆಲ್-17 ಬೌಲಿಂಗ್: ಭುವನೇಶ್ವರ್ ಕುಮಾರ್ 31 ಕ್ಕೆ 4, ಮೊಹಮ್ಮದ್ ಶಮಿ 39 ಕ್ಕೆ 2, ಕುಲ್ದೀಪ್ ಯಾದವ್ 59 ಕ್ಕೆ 2