ಬೆಂಗಳೂರು, ಜು.3: ಪದಗ್ರಹಣ ನೆಪದಲ್ಲಿ ರಾಷ್ಟ್ರೀಯ ವಿಪತ್ತು ನೀತಿ ಗಾಳಿಗೆ ತೂರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕ್ರಮ ಜರುಗಿಸುವಂತೆ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಂಪೂರ್ಣ ವೈಫಲ್ಯವನ್ನು ಕಂಡಿರುವಾಗ ಸಮರ್ಥ ವಿರೋಧ ಪಕ್ಷದ ಅಧ್ಯಕ್ಷರಾಗಿ ಗುರುತರವಾದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ನಂಬಿದ್ದೆವು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವ್ಯಾಪಕವಾಗಿ ಕೋರೋನಾ ಸೋಂಕು ಹರಡುತ್ತಿರುವ ವೇಳೆಯಲ್ಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಠಕ್ಕೆ ಬಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸುತ್ತಿರುವ ರೀತಿಯಲ್ಲಿಯೇ ಮೊಂಡು ಹಠ ಮಾಡಿ ಪದಗ್ರಹಣ ಮಾಡುವ ಮೂಲಕ ನಿಮ್ಮ ಹಠ ಸಾದಿಸಿದ್ದಿರೇ ಹೊರತು ಮತ್ತೇನನ್ನೂ ಸಾಧಿಸಿಲ್ಲ ಎಂದು ಎಎಪಿ, ಡಿ.ಕೆ.ಶಿವಕುಮಾರ್ ವಿರುದ್ಧ ಟೀಕಾಪ್ರಹಾರ ನಡೆಸಿದೆ.
ಅನೇಕ ಅಕ್ರಮಗಳನ್ನು ಮಾಡಿ ಗುರುತರವಾದ ಆಪಾದನೆಗಳನ್ನು ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ಇವುಗಳೆಲ್ಲವನ್ನೂ ರಾಜ್ಯದ ಜನತೆ ಮರೆತಿದ್ದಾರೆಂಬ ಭಾವನೆಯಲ್ಲಿ ಮಾಡಿದ ಭ್ರಷ್ಟ ಕೆಲಸಗಳ ಕಳಂಕ ತೊಳೆದುಕೊಳ್ಳಲು ಹೊರಟಿದ್ದಾರೆ. ಶಿವಕುಮಾರ್ ತಮ್ಮ ಹೀರೋಯಿಸಂ ಅನ್ನು ಬಿಂಬಿಸಿಕೊಳ್ಳಲು ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಮಾಧ್ಯಮಗಳನ್ನು ನಿಮ್ಮ ಕಳ್ಳ ಗಂಟಿನ ಮೂಲಕ ದೊಡ್ಡ ದೊಡ್ಡ ಜಾಹೀರಾತುಗಳನ್ನು ನೀಡಿ , ನೇರ ಪ್ರಸಾರಗಳನ್ನು ಮಾಡಿಸಿಕೊಳ್ಳುವ ಮೂಲಕ ಬಿಜೆಪಿ ಮಾಡಿದಂತಹ ಕೆಟ್ಟ ರಾಜಕಾರಣವನ್ನೇ ಕಾಂಗ್ರೆಸ್ ಪಕ್ಷವು ಸಹ ಮಾಡಲು ಹೊರಟಿರುವುದು ನೈತಿಕ ದಿವಾಳಿತನ ತೋರಿಸುತ್ತದೆ ಎಂದು ಆಪ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸೋಂಕು ಹರಡುವ ಭೀತಿ ಇರುವ ಕಾರಣ 50 ಜನರಿಗಿಂತ ಹೆಚ್ಚಿನ ಜನ ಸೇರಬಾರದು ಎನ್ನುವ ಕಾನೂನು ಇದ್ದರೂ ರಾಜ್ಯದ ನಾನಾ ಭಾಗದಲ್ಲಿ ಎಲ್‌ಇಡಿ ಪರದೆಗಳ ಎದುರು ಹಾಗೂ ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ನೂರಾರು ಜನ ಭಾಗವಹಿಸಿ ನಿಯಮ ಉಲ್ಲಂಘಿಸಿದ್ದಾರೆ. ಇದೇ ರೀತಿ ರಾಜ್ಯಾದ್ಯಂತ 16000 ಕಡೆಗಳಲ್ಲಿ 19 ಲಕ್ಷ ಕಾರ್ಯಕರ್ತರನ್ನು ಸೇರಿಸಿ ಕಾರ್ಯಕ್ರಮಗಳನ್ನು ನಡೆಸುವ ಅವಶ್ಯಕತೆ ನಿಜಕ್ಕೂ ಇತ್ತೇ ?. ಪಕ್ಷದ ಆಂತರಿಕ ವಿಚಾರವಾದರೂ ಆರೋಗ್ಯ ತುರ್ತು ಪರಿಸ್ಥಿತಿಯಂತಹ ಈ ಸಂದರ್ಭದಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತರುಗಳ ಆರೋಗ್ಯವನ್ನೂ ಸಹ ಪರಿಗಣಿಸಬೇಕಿತ್ತು ಎಂದು ಎಎಪಿ ಹೇಳಿದೆ.
ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರ ಮೇಲೆ ಮೇಲೆ ರಾಷ್ಟ್ರೀಯ ವಿಪತ್ತು ಕಾಯ್ದೆಯ ಪ್ರಕಾರ ಕ್ರಮ ಕೈಗೊಂಡು ರಾಜ್ಯ ಸರ್ಕಾರ ಜನತೆಗೆ ಮಾದರಿಯಾಗ ಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.