ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ

 ಬೆಂಗಳೂರು ಜೂನ್ 24:  ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಗ್ರಾಮ ವಾಸ್ತವ್ಯ ಬಗ್ಗೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿರುವ ವಿಧಾನಸಭೆಯ ವಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಸರ್ಕಾರದ ವಿವಿಧ ವೈಫಲ್ಯಗಳನ್ನು ಒಳಗೊಂಡಿರುವ ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ.  ಪಕ್ಷ ಇತರೆ ನಾಯಕರಾದ ಪರಿಷತ್ ಸದಸ್ಯ ಎನ್ ರವಿಕುಮಾರ್, ಡಾ. ಎ ಬಿ ಮಾಲಕರೆಡ್ಡಿ, ಲೇಹರ್ ಸಿಂಗ್, ವಿಜಯೇಂದ್ರ ಅವರ ಜೊತೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಸರ್ಕಾರಕ್ಕೆ  ಪ್ರಮುಖವಾಗಿ 10 ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.  ಬಿಜೆಪಿ ಜೊತೆ ಸೇರಿ ಸರ್ಕಾರ  ಮಾಡಿದ್ದ ಸಮಯದಲ್ಲಿ ನಡೆಸಿದ ಗ್ರಾಮವಾಸ್ತವ್ಯದ ಚಿತ್ರಣ ನೀಡಿದ್ದು ಇದನ್ನು ನೀವೆ ಹೋಗಿ ಖುದ್ದಾಗಿ ಪರಿಶೀಲನೆ ಮಾಡಿ ನೋಡಿ ಎಂದು ಸವಾಲು ಹಾಕಿದ್ದಾರೆ.ಗ್ರಾಮ ವಾಸ್ತವ್ಯ ದಿಂದಲೇ ಗ್ರಾಮದ  ಸಮಸ್ಯೆ ಗಳು ಪರಿಹಾರವಾಗಲಿದೆ ನಿಮ್ಮ ನಂಬಿಕೆ ಎಷ್ಟು ಸರಿಯಿದೆ. ? 

     ಕಾಂಗ್ರೆಸ್ ಜೆಡಿಎಸ್ ನ ಸಮ್ಮಿಶ್ರ ಸರ್ಕಾರದ ನಾಯಕರು, ಸಚಿವರುಗಳ ಬೀದಿ ಜಗಳ ಟಿವಿ ಹಾಗೂ ಪತ್ರಿಕೆಗಳಲ್ಲಿ ನೋಡಿ ಜನರು ಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ  ಶೂನ್ಯವಾಗಿದೆ.  ಸರ್ಕಾರದ ಇಲಾಖೆಗಳಲ್ಲಿ ನಿತ್ಯ  ಹಗಲು ಲೂಟಿ ನಡೆಯುತ್ತಿದೆ. ಆದರೂ ಕುಮಾರಸ್ವಾಮಿ ರಾಜ್ಯದ  ಅಭಿವೃದ್ಧಿ ಮಾಡುತ್ತೇನೆಂದು ಭಾಷಣ ಬಿಗಿಯುತ್ತಿದ್ದಾರೆ.  ಇಂತಹ ಭ್ರಮೆಯಿಂದ ಜನರಿಗೆ ಮುಕ್ತಿ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.  ಬಿಎಸ್ವೈ ಪ್ರಶ್ನೆಗಳ  ಸರಮಾಲೆ ಇಂತಿದೆ.     1 ರೈತರ ಆತ್ಮಹತ್ಯೆ ಬಗ್ಗೆ ನಿಮಗೆ ಮಾಹಿತಿ ಇದೆಯೇ ?   2 ರೈತರ ಸಂಪೂರ್ಣ ಸಾಲಮನ್ನಾ  ಮಾಡಿದ್ದೀರಾ?     3  ರಾಜ್ಯದಲ್ಲಿ ಬರ ಇದ್ದರೂ , ನೀವು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಯಾಕೆ?   4 ಐಎಂಎ ಮಾಲೀಕನ ಜೊತೆ ಕುಳಿತು ಬಿರಿಯಾನಿ ತಿಂದ ನೀವು, ವಂಚನೆಗೆ ಒಳಗಾದವರಿಗೆ ಯಾವ ರೀತಿ ನ್ಯಾಯ ಕೊಡುತ್ತೀರಿ ?   5  ಐಎಂಎ ಹಗರಣದಲ್ಲಿ  6 ಸಾವಿರ ಕೋಟಿ ಅಲ್ಪಸಂಖ್ಯಾತ ಬಡ ಜನರ ಹಣದೊಂದಿಗೆ ಪರಾರಿಯಾದ  ಮನ್ಸೂರ್ ಅಹಮದ್ ಜೊತೆ ಬಿರಿಯಾನಿ  ಊಟ ಎಷ್ಟರ ಮಟ್ಟಿಗೆ ಸರಿ?   6. ಐಎಂಎ ಹಗರಣವನ್ನು  ಸಿಬಿಐಗೆ ವಹಿಸಬೇಕು ಎಂದು ಶೋಷಣೆಗೊಳಗಾಗಿರುವ ಅಲ್ಪಸಂಖ್ಯಾತರು, ಕೂಲಿಕಾರ್ಮಿಕರು ,  ಹಿರಿಯರು ಮತ್ತು ಅಲ್ಲದೇ ವಿಪಕ್ಷವೂ ಕೂಡ ಬೇಡಿಕೆಯನ್ನು ಮಂಡಿಸಿದರೂ ಸಿಬಿಐ ತನಿಖೆಗೆ  ನೀಡುತ್ತಿಲ್ಲವೇಕೆ?  7.  ಸ್ಟಾರ್ ಹೋಟೆಲ್ ನಲ್ಲಿ ಆಡಳಿತ ನಡೆಸುವಾಗಲೇ  1500 ರೈತರು  ಆತ್ಮಹತ್ಯೆಗೆ ಶರಣಾಗಿದ್ದು  ಇದಕ್ಕೆ  ನಿಮ್ಮ ಉತ್ತರವೇನು? 8.  ಬಳ್ಳಾರಿ ಜಿಲ್ಲೆಯ ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನನ್ನು ಕೇವಲ 1.22 ಲಕ್ಷ ರೂ.ಗೆ  1 ಎಕರೆಯಂತೆ ಅತಿ ಕನಿಷ್ಠ ಬೆಲೆಗೆ ಮಾರಾಟ ಮಾಡುವ ಸಂಬಂಧ ತಾವು ಪಡೆದಿರುವ ಕಿಕ್ ಬ್ಯಾಕ್  ಎಷ್ಟು? 9. ದೇಶದಲ್ಲಿ  ವಿಜ್ಞಾನ, ತಂತ್ರಜ್ಞಾನ ಇಷ್ಟೊಂದು ಪ್ರಗತಿಯಲ್ಲಿದ್ದ ಸಂದರ್ಭದಲ್ಲಿ ಅಧಿಕಾರಿಗಳು,  ಸರ್ಕಾರಿ  ಉದ್ಯೋಗಿಗಳು, ಮಾಧ್ಯಮಗಳಿಂದ ಮಾಹಿತಿ ಪಡೆದು ಸಮಸ್ಯೆಗಳಿಗೆ ಪರಿಹಾರ  ನೀಡುವುದನ್ನು ಬಿಟ್ಟು ಗ್ರಾಮ ವಾಸ್ತವ್ಯ ಮಾಡಿಯೇ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ  ಹಠ  ಏಕೆ? ಇದು ಪ್ರಚಾರದ ಗಿಮಿಕ್ ಅಲ್ಲವೇ?  ಹಿಂದಿನ ಗ್ರಾಮ ವಾಸ್ತವ್ಯದ  ಸಾಧನೆಯ ಶ್ವೇತ ಪತ್ರ ನೀಡುವಿರಾ? 10. ಮುಖ್ಯಮಂತ್ರಿಗಳೇ ದಿಕ್ಕು ತಪ್ಪಿದ ಆಡಳಿತ ಹಾಗೂ ದಿನನಿತ್ಯ ನಿಮ್ಮ ಮೈತ್ರಿ ಪಕ್ಷಗಳ ಬೀದಿ ಜಗಳದಿಂದ ಕಂಗೆಟ್ಟಿರುವ ರಾಜ್ಯದ  ಜನರಿಗೆ ಮುಕ್ತಿ ಯಾವಾಗ?  ರೈತರ 48 ಸಾವಿರ ಕೋಟಿ ಸಾಲ ಮನ್ನಾ 24 ಗಂಟೆಗಳಲ್ಲಿ ಮಾಡುತ್ತೇನೆಂದು ಹೇಳಿದ್ದ ತಾವು  13 ತಿಂಗಳಾದರೂ ರೈತರ ಸಾಲ ಮನ್ನಾ ಮಾಡಲಿಲ್ಲ,  ರೈತರಿಗೆ ಹೊಸ ಸಾಲ ನೀಡುತ್ತಿಲ್ಲ,  ಋಣಮುಕ್ತ ಪತ್ರ ಕೊಡುತ್ತೇನೆಂದು ಭಾಷಣ ಬಿಗಿಯುತ್ತೀರಿ? ಕಣ್ಣೀರು ಸುರಿಸುತ್ತೀರಿ ಇಂತಹ ನಾಟಕವನ್ನು ಜನರು ಇನ್ನು ಎಷ್ಟು ಕಾಲ ನಂಬಬೇಕು? 

     ರಾಜ್ಯಾದ್ಯಂತ ಆವರಿಸಿರುವ   ಬರದಿಂದ  ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ, ದನಕರುಗಳಿಗೆ ಪಶು-ಪಕ್ಷಿಗಳಿಗೆ  ಮೇವು ನೀರಿಲ್ಲದ ಪರಿಸ್ಥಿತಿಯಲ್ಲಿ ರಾಜ್ಯದ ಹಿಂದುಳಿದ ಜಿಲ್ಲೆಗಳ ಜನರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ  ಹೋಗುತ್ತಿದ್ದಾರೆ. ಇಂತಹ ಸಮಯದಲ್ಲಿ ಗ್ರಾಮ ವಾಸ್ತವ್ಯದ ನಾಟಕ ಸರಿಯೇ?  ರಾಜ್ಯದಲ್ಲಿ ಸಾವಿರಾರು ಶಾಲೆ-ಕಾಲೇಜುಗಳ ಸುಣ್ಣ-ಬಣ್ಣ ಶೌಚಾಲಯಗಳಿಗೆ ಹಣವಿಲ್ಲ.  ವಿಶ್ವವಿದ್ಯಾಲಯಗಳಿಗೆ ಹಣಕಾಸಿನ ನೆರವು ನೀಡುತ್ತಿಲ್ಲ, 40 ಸಾವಿರಕ್ಕೂ ಹೆಚ್ಚು  ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಗುಣಮಟ್ಟದ ಶಿಕ್ಷಣ ಅಧೋಗತಿಗೆ  ತಲುಪಿದೆ. 4  ತಿಂಗಳುಗಳಿಂದ ಶಿಕ್ಷಕರಿಗೆ, ವೈದ್ಯರುಗಳಿಗೆ ವೇತನ ಕೊಟ್ಟಿಲ್ಲ , ಮಕ್ಕಳಿಗೆ  ಸಮವಸ್ತ್ರ, ಸೈಕಲ್, ಶೂ, ಸಿಕ್ಕಿಲ್ಲ. ಈಗ ಶಾಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ  ಜ್ಞಾನೋದಯ ಸ್ಟಾರ್ ಹೋಟೆಲಿನಲ್ಲಿ ಆಯಿತೇ? ನಿಮ್ಮ  ಕನಸಿನ ಬಜೆಟ್  ಕೆಲವೇ ಬೆರಳೆಣಿಕೆಯ ಜಿಲ್ಲೆಗಳಿಗೆ ಸೀಮಿತವಾಗಿ ಈಗ ಉತ್ತರ ಕರ್ನಾಟಕ  ಅಭಿವೃದ್ಧಿ ಮಾಡುವೆ ಎಂದು ಗ್ರಾಮ ವಾಸ್ತವ್ಯ ಮಾಡುವ ನೀವು ಉತ್ತರ ಕರ್ನಾಟಕದ  ಅಭಿವೃದ್ಧಿಗೆ   ಬಜೆಟ್ ನಲ್ಲಿ ಎಷ್ಟು ಹಣ ಇಟ್ಟಿದ್ದೀರಿ? ಸರ್ಕಾರದಲ್ಲಿ ನಿಮ್ಮ  ಘೋಷಣೆಗಳನ್ನು ಪೂರ್ತಿ  ಮಾಡಲು ಹಣ ಎಲ್ಲಿಂದ ತರುತ್ತೀರಿ? ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.