ವಿಕ್ರಂ ಗೌಡ ಎನ್ ಕೌಂಟರ್: ಡಿಜಿಪಿ ಡಿ.ರೂಪ ಸ್ಥಳಕ್ಕೆ ಭೇಟಿ
ಉಡುಪಿ: ಹೆಬ್ರಿ ತಾಲ್ಲೂಕಿನ ಪೀತ್ಬೈಲಿನಲ್ಲಿ ಎಎನ್ಎಫ್ ನವರು ನಡೆಸಿದ ಎನ್ ಕೌಂಟರ್ ನಲ್ಲಿ ಹತನಾದ ಹೆಬ್ರಿ ತಾಲ್ಲೂಕಿನ ಕೂಡ್ಲವಿನ ವಿಕ್ರಂ ಗೌಡನ ವಿರುದ್ದ ಕೊಲೆ ಪ್ರಕರಣವೂ ಸೇರಿದಂತೆ 61 ಪ್ರಕರಣಗಳು ದಾಖಲಾಗಿದ್ದವು ಎಂದು ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಡಿ.ರೂಪ ತಿಳಿಸಿದರು.
ನಕ್ಸಲರ ಚಲನವಲನದ ಬಗ್ಗೆ ಮಾಹಿತಿ ಮೇರೆಗೆ ಎಎನ್ಎಫ್ ಕೋಂಬಿಂಗ್ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಕ್ಸಲರು ಮುಖಾಮುಖಿಯಾಗಿದ್ದಾರೆ. ಶರಣಾಗತಿಗೆ ಸೂಚನೆ ನೀಡಿದರೂ, ನಕ್ಸಲರ ತಂಡದಿಂದ ಎಎನ್ಎಫ್ ಸಿಬಂದಿ ದಾಳಿಗೆ ತಯಾರಿ ನಡೆಸಿದರು. ಈ ವೇಳೆ ಎರಡು ಕಡೆಗಳಿಂದ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಸಾವನ್ನಪ್ಪಿದ್ದಾರೆ. ಈತನ ವಿರುದ್ಧ ಕೇರಳದಲ್ಲೂ 19 ಪ್ರಕರಣಗಳು ದಾಖಲಾಗಿವೆ ಎಂದರು. 15 ದಿನಗಳಿಂದಲೂ ಶೋಧ ಕಾರ್ಯಾಚರಣೆ ನಡೆಯುತ್ತಿತ್ತು ಎಂದೂ ಹೇಳಿದರು.
ವಿಕ್ರಮ್ ಗೌಡನಿಗೆ 46 ವರ್ಷ ವಯಸ್ಸಾಗಿದ್ದು, ಕಬಿನಿ ದಳದ 2ನೇ ತಂಡವನ್ನು ಮುನ್ನಡೆಸುತ್ತಿದ್ದ. 4ನೇ ತರಗತಿ ವಿದ್ಯಾಭ್ಯಾಸ ಮಾತ್ರ ಪಡೆದಿದ್ದ ಎಂದು ಮಾಹಿತಿ ನೀಡಿದರು.
ಮಾಧ್ಯಮದವರನ್ನು ಘಟನಾ ಸ್ಥಳದಿಂದ ಒಂದು ಕಿ.ಮೀ ದೂರದಲ್ಲೇ ಪೊಲೀಸರು ತಡೆದರು.
ಸೋಮವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡ ಹತನಾಗಿದ್ದಾನೆ. ಸೋಮವಾರ ರಾತ್ರಿ ಐದು ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ಬಂದಿದ್ದ ವೇಳೆ ಎಎನ್ಎಫ್ ತಂಡ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ವಿಕ್ರಮ್ ಹತನಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.