ವಿಜಯಪುರ: ಮತದಾರರ-ನೊಂದಣಿ: ಕಡ್ಡಾಯ ಮತದಾನ ದೇಶ-ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಿಂದ ಅಂಚೆ ಪತ್ರದ ಮೂಲಕ ಜಾಗೃತಿ

ಲೋಕದರ್ಶನ ವರದಿ

ವಿಜಯಪುರ 13: ದೇಶದ ಉಜ್ವಲ ಭವಿಷ್ಯ ಹಾಗೂ ಮಕ್ಕಳ  ಉತ್ತಮ ಭವಿಷ್ಯಕ್ಕಾಗಿ ಮಕ್ಕಳ ಮೂಲಕ ಪಾಲಕರಿಗೆ ಅಂಚೆ ಪತ್ರದ ಮೂಲಕ ಪಾಲಕರನ್ನು ಜಾಗೃತಿಗೊಳಿಸುವ ವಿಶೇಷ ಅಭಿಯಾನವನ್ನು ಆರಂಭಿಸಲಾಗುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳೂವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ವಿಕಾಸ ಕಿಶೋರ ಸುರಳಕರ ಸೂಚನೆ ನೀಡಿದರು. 

ಜಿಲ್ಲೆಯಲ್ಲಿ ಇಂತಹ ನಾಲ್ಕು ಲಕ್ಷ ಮಕ್ಕಳು ಅಂಚೆ ಪತ್ರದ ಮೂಲಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗುವುದರಿಂದ ಸುಮಾರು 4ಲಕ್ಷ ಕುಟುಂಬಕ್ಕೆ ಈ ಪತ್ರ ಮಕ್ಕಳಿಂದಲೇ ಲಭ್ಯವಾಗಲಿದ್ದು, ಪರೀಕ್ಷೆಗಳು ಮುಗಿಯುವ ಮುಂಚಿತವಾಗಿ ಈ ಕ್ರಮವನ್ನು ಕೈಗೊಂಡು ಪಾಲಕರಲ್ಲಿ ಜಾಗೃತಿ ಮೂಡಿಸುವಂತೆ ಅವರು ಸೂಚನೆ ನೀಡಿದರು. 

ಮಾಹಿತಿ ವಿನಿಮಯ ಹಾಗೂ ಮನರಂಜನೆ ಕಾರ್ಯಕ್ರಮದ ಅಂಗವಾಗಿ ಕಡಿಮೆ ಮತದಾನವಾಗಿರುವ ವಿವಿಧ ಸ್ಥಳಗಳಲ್ಲಿ ಸುಪ್ರಸಿದ್ಧ ಹಾಸ್ಯ ಕಲಾವಿದರಾದ ಪ್ರಾಣೇಶ, ಮಹಾಮನಿ, ವಿವಿಧ ಕಲಾವಿದರು ಕಾರ್ಯಕ್ರಮ ನೀಡಲಿದ್ದು, ವೇಳಾಪಟ್ಟಿಯನ್ವಯ ಈ ಕಾರ್ಯಕ್ರಮ ಶಿಸ್ತುಬದ್ಧವಾಗಿ ಹಮ್ಮಿಕೊಳ್ಳುವ ಜೊತೆಗೆ ಹೆಚ್ಚು ಹೆಚ್ಚು ಜನರು ಭಾಗವಹಿಸಿ ಮತದಾರ ನೊಂದಣಿ ಹಾಗೂ ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳಲು ಪ್ರೊತ್ಸಾಹಿಸಲು ಸಲಹೆ ನೀಡಿದ ಅವರು, ಈ ಕಾರ್ಯಕ್ರಮಗಳ ಕುರಿತು ಸೂಕ್ತ ಪ್ರಚಾರ ವ್ಯವಸ್ಥೆ ಸಹ ಕೈಗೊಳ್ಳಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಂತೆ-ಜಾತ್ರೆಗಳ ದಿನಗಳಂದು ವಿವಿಧ ಚಟುವಟಿಕೆಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು. 

ಜಿಲ್ಲೆಯ 17 ಸಾವಿರ ವಿಕಲಾಂಗ ಮತದಾರರ ಪಟ್ಟಿ ಲಭ್ಯವಿದ್ದು, ಲೋಕಸಭಾ ಚುನಾವಣೆಯಲ್ಲಿ ಇವರು ಮತ ಚಲಾಯಿಸಲು ಅನುಕೂಲವಾಗುವಂತೆ ಪ್ರತಿ ಗ್ರಾಮಕ್ಕೆ ಒಂದರಂತೆ ಅಟೋ ಸೌಲಭ್ಯ ಕಲ್ಪಿಸಲಾಗುವುದು. ವಿವಿಧ ಗ್ರಾಮಗಳಲ್ಲಿರುವ ಇಂತಹ ಮತದಾರರೆಲ್ಲರನ್ನೂ ಗುರುತಿಸಿಕೊಂಡು ಮತದಾನ ಕೇಂದ್ರಕ್ಕೆ ಕರೆತರುವಂತಹ ವ್ಯವಸ್ಥೆಯನ್ನು ಕೈಗೊಳ್ಳಲು ಓರ್ವರನ್ನು ನಿಯೋಜಿಸುವಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಅದರಂತೆ 14ನೇ ಹಣಕಾಸು ಅಡಿಯಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಈಗಾಗಲೇ ವ್ಹೀಲ್ ಚೇರ ವಿತರಿಸಲಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ನೀಡಲಾದ ಇಂತಹ ವ್ಹೀಲ್ ಚೇರ್ಗಳ ಸುಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿ, ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಸಹಾಯ ಗುಂಪುಗಳು, ಸಹಕಾರಿ ಸಂಘಗಳ ಸದಸ್ಯರೊಂದಿಗೆ ಸಭೆ ನಡೆಸಬೇಕು. ಮತಗಟ್ಟೆ ಮಟ್ಟದ ಜಾಗೃತಿ ತಂಡಗಳನ್ನು ರಚಿಸಿಕೊಂಡು ಸೂಕ್ತ ಜಾಗೃತಿ ಮೂಡಿಸಬೇಕು. ಪ್ರತಿ ಗ್ರಾಮ ಪಂಚಾಯತ್ ಕಚೇರಿಗೆ ಫ್ಲೆಕ್ಸ್ವೊಂದನ್ನು ಅಳವಡಿಸಿ ಮತದಾರ ನೊಂದಣಿ- ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಬೇಕು. ಸೈಕಲ್ ಜಾಥಾ, ಕಾಲ್ನಡಿಗೆ ಜಾಥಾ, ಬೈಕ್ ರ್ಯಾಲಿಗಳನ್ನು ಹಮ್ಮಿಕೊಳ್ಳಬೇಕು. ರಂಗೋಲಿ, ಚಿತ್ರಕಲಾ ಸ್ಪರ್ಧೆ, ಬೀದಿ ನಾಟಕ, ಹಾಗೂ ನಿಗದಿಪಡಿಸಿದ ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಪ್ರತಿ ತಾಲೂಕಾ ಮಟ್ಟದಲ್ಲಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ವೀಪ್ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಚರ್ಚಿಸಿದ ವಿಷಯಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಪ್ರತಿ ದಿನ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಚಟುವಟಿಕೆಗಳ ವರದಿ ಸಲ್ಲಿಸಬೇಕೆಂದು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ಕನಿಷ್ಠ ಮೂಲಸೌಕರ್ಯ ಹಾಗೂ ದುರಸ್ತಿಗೆ ಸಂಬಂಧಪಟ್ಟಂತೆ ಸೂಕ್ತ ಪರಿಶೀಲನೆ ನಡೆಸಬೇಕು. 14ನೇ ಅನುದಾನದಡಿ ಇಂತಹ ಮತಗಟ್ಟೆಗಳ ದುರಸ್ತಿ ಕೈಗೊಳ್ಳಬೇಕು. ಶೌಚಾಲಯ, ಕುಡಿಯುವ ನೀರು, ರ್ಯಾಂಪ್ಗಳ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಸೌಕರ್ಯ, ಶಾಲಾ ಕೊಠಡಿಗಳ ಸುವ್ಯವಸ್ಥೆ ಕುರಿತು ವರದಿ ಸಿದ್ದಪಡಿಸಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಜಿಲ್ಲೆಯಲ್ಲಿ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆ ಕುರಿತು ಸೂಕ್ತ ನಿಗಾ ಇಡಬೇಕು. ಸಂಚಾರಿ ವಿಚಕ್ಷಣ ದಳ, ವಿಡಿಯೋ ಸರ್ವೇಲೆನ್ಸ್, ವಿಡಿಯೋ ಕಣ್ಗಾವಲು ತಂಡಗಳೊಂದಿಗೆ ಸಮನ್ವಯತೆ ಸಾಧಿಸಿ ಯಾವುದೇ ರೀತಿಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಬ್ಯಾನರ್, ಪೋಸ್ಟರ್ ಇದ್ದಲ್ಲಿ  ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ನಂತರ ಅದರಂತೆ ಸ್ವೀಪ್ ಚಟುವಟಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ ಉಪಸ್ಥಿತರಿದ್ದರು.