ಕರ್ನಾಟಕದ ಉಪಲಬ್ಧ ರಾಷ್ಟ್ರಕೂಟರ ಮೊದಲ ಗಂಡುಭೇರುಂಡಕ್ಕೆ ಬೇಕಿದೆ ರಕ್ಷಣೆ

Vijaypur news- 15-03

ವಿಜಯಪುರ ನಗರದ ಪುರಾತನ ಕೋಟೆಯಲ್ಲಿ ರಾಷ್ಟ್ರಕೂಟರ ರಾಜ್ಯ ಲಾಂಛನವಾಗಿದ್ದ ಗಂಡ ಭೇರುಂಡ ಪಕ್ಷಿಯ ಉಬ್ಬು ಶಿಲ್ಪವಿದ್ದು ಇದು ವಿಜಯಪುರ ನಗರದ ಕೋಟೆ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾಗಿರುವ ಬಗ್ಗೆ ಅಧಿಕೃತ ಧಾಖಲೆಯಾಗಿದೆ. ಮಾನ್ಯಖೇಟದಿಂದ ರಾಜ್ಯವಾಳಿದ ರಾಷ್ಟ್ರಕೂಟರ ಆಡಳಿತಕ್ಕೆ ವಿಜಯಪುರ ಜಿಲ್ಲೆ ಒಳಪಟ್ಟಿತ್ತು. ವಿಜಯಪುರ ನಗರದಲ್ಲಿ ಮೊದಲ ಬಾರಿಗೆ 8-10ನೇ ಶತಮಾನದ ರಾಷ್ಟ್ರಕೂಟರಿಗೆ ಸಂಬಂಧಪಟ್ಟ ಈ ಶಿಲ್ಪವನ್ನು ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಗುರುತಿಸಲಾಗಿದ್ದು. ರಾಜ್ಯದಲ್ಲಿ ಉಪಲಬ್ದ ಇರುವ ಅತ್ಯಂತ ಪ್ರಾಚೀನ ಶಿಲ್ಪ ಇದಾಗಿದೆ. 

ಎರಡು ತಲೆಯ ಪಕ್ಷಿಯು ತನ್ನ ಉಗುರುಗಳು ಮತ್ತು ಕೊಕ್ಕುಗಳಲ್ಲಿ ಎರಡು ಆನೆಗಳನ್ನು ಹಿಡಿದಿಟ್ಟುಕೊಂಡಿದ್ದು ತನ್ನ ಅಗಾಧ ಶಕ್ತಿಯನ್ನು ಬಹಿರಂಗಪಡಿಸುತ್ತದೆ. ಇದು ರಾಷ್ಟ್ರಕೂಟರ ಯುದ್ಧ ಕೌಶಲ್ಯವನ್ನು ಪ್ರತಿಬಿಂಬಿಸುತ್ತದೆ.  

ರಾಜ್ಯದಲ್ಲಿ ಗಂಡಭೇರುಂಡದ ಇತಿಹಾಸ : ದೇವಗಿರಿ ಯಾದವರು ತಮ್ಮ ಕೋಟೆ ಕೊತ್ತಲುಗಳ ಮೇಲೆ, ಬೇಲೂರಿನ ಚೆನ್ನಕೇಶವ ದೇವಸ್ಥಾನದ ಮೇಲೆ, ಅಚ್ಯುತ ದೇವರಾಯನ ಕಾಲದ ನಾಣ್ಯಗಳ ಮೇಲೆ ಗಂಡಭೇರುಂಡವನ್ನು ಬಳಸಲಾಗಿದೆ. 

ಕೆಳದಿ ನಾಯಕರ ರಾಜಧಾನಿ ಶಿವಮೊಗ್ಗ ಜಿಲ್ಲೆಯ ಕೆಳದಿ ಪಟ್ಟಣದಲ್ಲಿರುವ ರಾಮೇಶ್ವರ ದೇವಾಲಯದ ಛಾವಣಿಯ ಮೇಲೆ ಗಂಡಭೇರುಂಡ ಪ್ರತಿಮೆ ಕಂಡುಬರುತ್ತದೆ. ಮೈಸೂರು ರಾಜ್ಯದ ಲಾಂಛನ: ಗಂಡಭೇರುಂಡವನ್ನು ಮೈಸೂರಿನ ಒಡೆಯರ್ ಕಾಲದಲ್ಲಿ ರಾಜ್ಯ ಲಾಂಛನವಾಗಿ ಬಳಸಿದ್ದಾರೆ. ನಂತರ ಕರ್ನಾಟಕ ಸರ್ಕಾರವು ಗಂಡಭೇರುಂಡವನ್ನು ರಾಜ್ಯ ಲಾಂಛನವಾಗಿ ಬಳಸುತ್ತ ಬಂದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳು,ಬಸ್ ಗಳ ಟಿಕೆಟ್‌ಗಳಲ್ಲಿ ಬಳಸಲಾಗುತ್ತಿದೆ. ಭಾರತೀಯ ನೌಕಾಪಡೆಯ ಹಡಗಿನ ಮೇಲೆ ಗಂಡಭೇರುಂಡವನ್ನು ಬಳಸಲಾಗಿದೆ. ಇಂತಹ ಗಂಡುಭೇರುಂಡವು ರಾಷ್ಟ್ರಕೂಟರ ಕಾಲದ ತರ್ದವಾಡಿ ನಾಡಿನಲ್ಲಿ ಬರುವ ಇಂದಿನ ವಿಜಯಪುರದ ಕೋಟೆಯಲ್ಲಿ ಕೆತ್ತಿರುವುದು ಕರ್ನಾಟಕದಲ್ಲಿ ಗಂಡಭೇರುಂಡದ ಬಗ್ಗೆ ಸಿಗುವ ಮೊದಲ ಉಬ್ಬು ಶಿಲ್ಪವಾಗಿದೆ. 

ಭಾರತೀಯ ಪುರಾತತ್ವ ಇಲಾಖೆಗೆ ಸೇರಿದ ಕೋಟೆಯ ಮೇಲೆ ಇರುವ ಐತಿಹಾಸಿಕ ಮಹತ್ವದ ಗಂಡಭೇರುಂಡ ಇರುವ ಕೋಟೆ ಪ್ರದೇಶವನ್ನು ಸಂರಕ್ಷಣೆ ಮಾಡಿ ಮಾಹಿತಿ ಫಲಕ ಅಳವಡಿಸಿ ಪ್ರವಾಸಿಗರು ಮತ್ತು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕೆನ್ನುತ್ತಾರೆ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಗೌರವ ಅಧ್ಯಕ್ಷ ಡಾ ಸಂಗಮೇಶ ಕಲ್ಯಾಣಿ ಹಾಗೂ ಯುವ ಬರಹಗಾರ ಕಲ್ಲಪ್ಪ ಶಿವಶರಣ ಅವರು. ಆ ಮೂಲಕ ಯುವ ಜನರಿಗೆ ನಾಡಿನ ಇತಿಹಾಸವನ್ನು ಪರಿಚಯಿಸುವ ಕಾರ್ಯ ಮಾಡಲು ಕೇಂದ್ರ ಮತ್ತು ರಾಜ್ಯ ಪುರಾತತ್ವ, ಪ್ರಾಚ್ಯ ವಸ್ತು ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯವರು ಮುಂದಾಗಬೇಕಿದೆ. 

-ಲಾಯಪ್ಪ ಇಂಗಳೆ  

ಇತಿಹಾಸ ಸಂಶೋಧಕರು  

ಹಾಗೂ ಅಧ್ಯಕ್ಷರು ರಾಷ್ಟ್ರೀಯ ಸಂಶೋಧನಾ ವೇದಿಕೆ ವಿಜಯಪುರ -96320 96714