ವಿಜಯಪುರ: ನಾನು ಸಚಿವನಿಲ್ಲದಿದ್ದರೂ ಪವರಫುಲ್ ಇದ್ದೇನೆೆ: ಯತ್ನಾಳ

ವಿಜಯಪುರ 09: ಜಿಲ್ಲೆಗೆ ಸಚಿವರ ಬರ ಇರಬಹುದು. ಆದರೆ, ಅಭಿವೃದ್ಧಿಗೆ ಏನೂ ಬರವಿಲ್ಲ. ನಾನು ಸಚಿವನಾಗಿಲ್ಲದಿದ್ದರೂ ಅತ್ಯಂತ ಪವರಫುಲ್ ಆಗಿದ್ದೇನೆ ಎಂದು ವಿಜಯಪುರ ನಗರ ಮತಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಮುಂದೆ ಸಚಿವ ಸ್ಥಾನ ಸಿಗುತ್ತದೋ ಬಿಡುತ್ತದೋ ಗೊತ್ತಿಲ್ಲ, ಆದರ ಬಗ್ಗೆ ನಾನೇನೂ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ ಒಂದು ಮಾತಂತೂ ನಿಜ, ಸಚಿವನಾಗಿರದಿದ್ದರೂ ನಾನು ಪವರಫುಲ್ ಆಗಿ ಅಭಿವದ್ಧಿ ಕೆಲಸ ಮಾಡುತ್ತಿದ್ದೇನೆ ಎಂದರು.ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಸರಕಾರ ಬಿಡುಗಡೆ ಮಾಡುತ್ತಿದೆ. ನನಗೆ ಅಭಿವೃದ್ಧಿಯೇ ಮುಖ್ಯ. ವಿಜಯಪುರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮುಂದಿನ ಎರಡು ವರ್ಷಗಳಲ್ಲಿ ವಿಜಯಪುರದ ಚಿತ್ರಣವೇ ಬದಲಾಗಲಿದೆ ಎಂದರು.

ಸಚಿವ ಸ್ಥಾನಕ್ಕಾಗಿ ನಾನು ಎಂದಿಗೂ ಲಾಬಿ ಮಾಡುವುದಿಲ್ಲ, ಸಚಿವ ಸ್ಥಾನ ಕೊಡಿ ಎಂದು ಯಾರ ಮನೆಗೂ ಹೋಗುವುದಿಲ್ಲ. ನನಗೆ ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ, ರಾಜ್ಯದಲ್ಲಿ ನಮ್ಮ ಬಿಜೆಪಿ ಸರಕಾರ  ಸ್ಥಿರವಾಗಿರಬೇಕು ಎಂಬುದು ನನ್ನ ಬಯಕೆ. ಹೀಗಾಗಿ ನಾನು ಸಚಿವ ಸ್ಥಾನದ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಿಲ್ಲ. ಒಮ್ಮೊಮ್ಮೆ ತ್ಯಾಗವನ್ನೂ ಮಾಡಬೇಕಾಗುತ್ತದೆ.  ಇಲ್ಲವಾದರೆ ನಾವು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತರೇ ಏನು ಪ್ರಯೋಜನವಾಗುತ್ತಿತ್ತು, ಪ್ರತಿಪಕ್ಷದಲ್ಲಿದ್ದರೆ ಅಧಿಕಾರಿಗಳೂ ಮಾತು ಕೇಳುತ್ತಿರಲಿಲ್ಲ, ಅಭಿವೃದ್ಧಿ ಕೆಲಸಗಳೂ ಆಗುತ್ತಿರಲಿಲ್ಲ ಎಂದರು.

ವಿಜಯಪುರ ನಗರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಇದೇ ದಿ.16 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಗರಕ್ಕೆ ಆಗಮಿಸಲಿದ್ದು, ಸುಮಾರು 500 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದು ನನಗೆ ಅತೀವ ಹರ್ಷ ತಂದಿದೆ ಯತ್ನಾಳ ಹೇಳಿದರು.

ವಿಜಯಪುರ ನಗರ ಈ ಹಿಂದೆ ಗೂಂಡಾಗಳ ಸಾಮ್ರಾಜ್ಯದಂತಿತ್ತು, ಆದರೆ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಆನಪ್ರತಿನಿಧಿಗಳೇನಿಸಿಕೊಂಡವರೇ ಗೂಂಡಾ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿದ್ದರು, ಗೂಂಡಾಗಳ ಏಜೆಂಟರಂತೆ ವತರ್ಿಸುತ್ತಿದ್ದರು. ಈ ಗೂಂಡಾಗಳೇ ಮರಿ ದಾವೂದ್ ಇಬ್ರಾಹಿಂ ಆಗಿ ರೂಪುಗೊಳ್ಳುತ್ತಿದ್ದರು, ಬಡವರಿಗೆ ಗುಂಟಾ ಪ್ಲಾಟ್ ನೀಡಿ ಅವರ ಶೋಷಣೆ ಮಾಡುತ್ತಿದ್ದರು, ಈಗ ಅವರನ್ನು ಇಲಾಖೆ ಸಂಪೂರ್ಣ ಬಗ್ಗುಬಡಿದಿದೆ, ಪೊಲೀಸ್ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಮುಕ್ತವಾಗಿ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಲಾಗಿದೆ. ವಿಡಿಎ, ಮಹಾನಗರ ಪಾಲಿಕೆ ಹಾಗೂ ಪೊಲಿಶ್ ಇಲಾಖೆಗಳು ಉತ್ತಮ ಕೆಲಸ ಮಾಡುತ್ತಿವೆ. ನಾನು ಶಾಸಕನಾದ ಬಳಿಕ ಎಲ್ಲವೂ ಬದಲಾವಣೆಯಾಗುತ್ತಿದೆ. ಹಿಂದಿನ ಪರಿಸ್ಥಿತಿ ಈಗಿಲ್ಲ. ನಾನು ಕೈಗೊಂಡ ಕೆಲ ದಿಟ್ಟ ಕ್ರಮಗಳಿಂದಾಗಿ ನಗರದ ನಾಗರಿಕರು ನೆಮ್ಮದಿಯಿಂದ ಬದುಕುವಂತಾಗಿದೆ, ಇದಕ್ಕಾಗಿ ನನ್ನನ್ನು ಕರೆಸಿ ಸನ್ಮಾನವನ್ನೂ ಮಾಡಿದ್ದಾರೆ ಎಂದು ಯತ್ನಾಳ ಹೆಮ್ಮೆಯಿಂದ ಹೇಳಿದರು.