ಬೆಂಗಳೂರು 08: ಕಳೆದ ಎರಡು ದಶಗಳಿಗೂ ಹೆಚ್ಚಿನ ಕಾಲ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಅರಣ್ಯಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ಹೋರಾಟ ನಡೆಸುತ್ತಿದ್ದ ಆರು ಮಂದಿ ನಕ್ಸಲೀಯರು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರ ಸಮ್ಮುಖದಲ್ಲಿ ಬುಧವಾರ ಸಂಜೆ ಶರಣಾಗಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ರಾಜ್ಯದ ನಕ್ಸಲರಾದ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲದ ಸುಂದರಿ, ಮಾರಪ್ಪ ಅರೋಳಿ, ವನಜಾಕ್ಷಿ ಬಾಳೆಹೊಳೆ ಹಾಗೂ ಕೇರಳದ ವೈನಾಡಿನ ಎನ್. ಜೀಶಾ ಹಾಗೂ ತಮಿಳುನಾಡಿನ ಕೆ. ವಸಂತ್ ಅವರು ಹಸಿರು ಬಟ್ಟೆ ಕಳಚಿಟ್ಟು, ಕೆಂಪು ಬಾವುಟ ಕೆಳಗಿಟ್ಟು ಶರಣಾದರು. ಈ ವೇಳೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪೊಲೀಸರು ಶರಣಾದ ನಕ್ಸಲರನ್ನು ತಮ್ಮ ವಶಕ್ಕೆ ಪಡೆಯಲಿದ್ದು, ಕೋರ್ಟ್‌ಗೆ ಹಾಜರುಪಡಿಸಿ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲಿದ್ದಾರೆ. ಇದರೊಂದಿಗೆ ಹಲವು ದಶಕಗಳಿಂದ ಸರ್ಕಾರಕ್ಕೆ ತಲೆ ನೋವಾಗಿದ್ದ ನಕ್ಸಲ್ ಚಳವಳಿ ಬಹುತೇಕ ಅಂತ್ಯವಾಗಿದೆ.
ಶರಣಾದ ನಕ್ಸಲರ ಪೈಕಿ ಮುಂಡಗಾರು ಲತಾ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದವರು. ಇವರ ವಿರುದ್ಧ 85 ಪ್ರಕರಣಗಳಿವೆ.
ನಕ್ಸಲರು ಕಳೆದ ಮೂರು ದಿನಗಳಿಂದ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಜೊತೆ ಶರಣಾಗತಿ ಕುರಿತು ಮಾತುಕತೆಯನ್ನು ಚಿಕ್ಕಮಗಳೂರು ಕಾಡಿನಲ್ಲಿ ನಡೆಸುತ್ತಿದ್ದರು. ಬುಧವಾರ ಅವರುಗಳು ಶರಣಾಗಲು ದಿನಾಂಕ ನಿಗದಿ ಮಾಡಲಾಯಿತು. ಮೊದಲು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಶರಣಾಗಲಿದ್ದಾರೆ ಎಂಬ ಮಾಹಿತಿ ಇತ್ತು.ಆದರೆ ಬುಧವಾರ ಬೆಳಗ್ಗೆ ಚಿಕ್ಕಮಗಳೂರಿನಿಂದ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಜೊತೆ ಪೊಲೀಸರ ಭದ್ರತೆಯಲ್ಲಿ ಬೆಂಗಳೂರು ನಗರಕ್ಕೆ ಆಗಮಿಸಿದ ನಕ್ಸಲರು, ಮುಖ್ಯಮಂತ್ರಿಗಳ ಮುಂದೆ ಶರಣಾಗಿದ್ದಾರೆ.
ನಕ್ಸಲೀಯರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ ಬರಬೇಕೆಂದು ಪ್ರತಿಪಾದಿಸುವ ಹಾಗೂ ಜೀವಹಾನಿಯು ಯಾವ ಕಡೆಯು ನಡೆಯಬಾರದು ಎಂದು ಬಯಸುವ ವಿವಿಧ ಪ್ರಗತಿಪರ ಹಾಗೂ ಜನಪರ ವೇದಿಕೆಗಳ ಹಲವಾರು ಮುಖಂಡರು ಡಿಸೆಂಬರ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು.
ಮೂಲಗಳ ಪ್ರಕಾರ ರಾಜ್ಯದಲ್ಲಿ ಇನ್ನೂ ಓರ್ವ ನಕ್ಸಲ್ ಮಾತ್ರ ಶರಣಾಗತಿಗೆ ಬಾಕಿ ಉಳಿದಿದ್ದು. ಆತನ ಶರಣಾಗತಿಗೆ ಪ್ರಯತ್ನ ನಡೆಸಲಾಗುತ್ತಿದೆ.