ಲೋಕದರ್ಶನ ವರದಿ
ವಿಜಯಪುರ 23: ಲೋಕಕ್ಕೆ ಅನ್ನ ನೀಡುವ ರೈತನ ಬದುಕು ಇಂದು ಅತಂತ್ರವಾಗಿದ್ದು, ರೈತರ ಜೀವನ ಸಮಗ್ರವಾಗಿ ಅಭಿವೃದ್ಧಿಯಾಗಿ ಬದುಕು ಬಂಗಾರವಾಗಲಿ ಎಂದು ನ್ಯಾಯವಾದಿ ಹಾಗೂ ಕರ್ನಾಟಕ ಭೂ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದಾನೇಶ ಅವಟಿ ಹಾರೈಸಿದರು.
ನಗರದ ಶಿಕಾರಖಾನೆ ಸ್ಟೇಶನ್ ರಸ್ತೆಯ ಹನುಮಾನ ದೇವಸ್ಥಾನದಲ್ಲಿ ರೈತರ ದಿನಾಚರಣೆ ಕಿತ್ತೂರ ರಾಣಿ ಚೆನ್ನಮ್ಮ ವಿಶ್ವ ಲಿಂಗಾಯತ ಪಂಚಮಸಾಲಿ ಸೇವಾ ಸಮಿತಿ ಏರ್ಪಡಿಸಿದ್ದ ಕಾರ್ಯಕ್ರಮವನ್ನ ರಾಷ್ಟ್ರಮಾತೆ ಕಿತ್ತೂರ ಚೆನ್ನಮ್ಮನವರ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜ್ಯೋತಿ ಪ್ರಜ್ವಲಿಸಿ ಉದ್ಘಾಟನೆ ಮಾಡಿ ಮಾತನಾಡಿ ಕೃಷಿ ಪ್ರಧಾನವಾದ ಭಾರತ ದೇಶದಲ್ಲಿಂದು ಕೃಷಿ ಕಾಯಕ ಕುಂಠಿತಗೊಂಡಿದ್ದು ರೈತರು ನಾನಾರೀತಿಯ ಸಂಕಷ್ಟದಿಂದಾಗಿ ತೊಂದರೆಯಿಂದ ಬಳಲುತ್ತಿದ್ದಾರೆ. ಅತಿವೃಷ್ಠಿ ಅನಾವೃಷ್ಠಿಯಿಂದ ಬೆಳೆದ ಬೆಳೆ ಕೈಗೆ ಬರದೆ ಬಂದರು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ದೊರೆಯದೆ ಸಾಲಸೋಲ ಮಾಡಿ ಆತ್ಮ ಹತ್ಯೆಯ ದಾರಿ ತುಳಿಯುತ್ತಿರುವದು ವಿಷಾದನೀಯ ಎಂದರು.
ಸಂಘದ ಗೌರವ ಅಧ್ಯಕ್ಷ ಶರಣಪ್ಪ ಜಂಬಗಿ, ಯುವ ಧುರೀಣ ಮಂಜುನಾಥ ನಿಡೋಣಿ, ವಿಜಯಕುಮಾರ ಜಾಬಾ, ಕಲ್ಲಪ್ಪ ಅಡಿಹುಡಿ, ಜಗದೀಶ ಬಳೂತಿ ಮುಂತಾದವರು ಮಾತನಾಡಿದರು.
ರೈತ ಗೀತೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.