ಲೋಕದರ್ಶನ ವರದಿ
ವಿಜಯಪುರ 11: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಜಾರಿಗೊಳಿಸಿದ ಯೋಜನೆಗಳು, ವೃತ್ತಿ ಆಯ್ಕೆ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಕೌಶಲ್ಯಾಭಿವೃದ್ದಿ ಮೂಲಕ ವಿಧ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ಸಂವಾದದ ಮೂಲಕ ಮಾಹಿತಿ ವಿನಿಮಯದ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಭಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಯುವ ಸಬಲೀಕರಣ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಯುವ ಸಬಲೀಕರಣ ಕೇಂದ್ರ ಆರಂಭಿಸಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಯುವಜನತೆಗೆ ಈ ಕೇಂದ್ರದ ಮೂಲಕ ವದಗಿಸಲು ಅವಶ್ಯಕ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಪದವಿ, ಪದವಿಪೂರ್ವ ಹಾಗೂ ಪ್ರೌಡಶಾಲೆ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳವರು ಆಯಾ ಕಾಲೇಜುಗಳಿಂದ ಒರ್ವ ಸಂಯೋಜಕರನ್ನು ಮತ್ತು ತಲಾ 5 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಈ ಕೇಂದ್ರಕ್ಕೆ ನಿಯೋಜಿಸಬೇಕು, ಇಲ್ಲಿ ಅವಶ್ಯಕ ಮಾಹಿತಿ ಪಡೆದು ಎಲ್ಲ ವಿದ್ಯಾರ್ಥಿಗಳಿಗೆ ಸಂವಾದದ ಮೂಲಕ ಮಾಹಿತಿ ಹಂಚಿಕೊಳ್ಳಲು ಕಾರ್ಯಯೋಜನೆ ರೂಪಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಅದರಂತೆ ಫೆಬ್ರವರಿ ಅಂತ್ಯಕ್ಕೆ ಪದವಿ ಕಾಲೇಜ ಸಂಯೋಜಕರನ್ನು ನೇಮಿಸಿಕೊಂಡು ಕಾರ್ಯಾಗಾರವೊಂದನ್ನು ಆಯೋಜಿಸಿ ಸೂಕ್ತ ಮಾಹಿತಿ ಒದಗಿಸಬೇಕು. ಮುಂದಿನ ದಿನಗಳಲ್ಲಿ ಯುವ ಸಬಲೀಕರಣ ಕೇಂದ್ರದ ಮೂಲಕ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಂವಾದ ಕಾರ್ಯಕ್ರಮವನ್ನೂ ವಿಶೇಷವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಂವಾದ ಕಾರ್ಯಕ್ರಮವು ಸಹ ಆಯೋಜಿಸಿ ಸೂಕ್ತ ಮಾಹಿತಿ ಒದಗಿಸಲು ಕ್ರಮಕೈಗೊಳ್ಳುವಂತೆ ಅವರು ಸೂಚನೆ ನೀಡಿ, ಈ ಕುರಿತ ಸಮಗ್ರ ಯೋಜನೆ ರೂಪಿಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಪದವಿ ಕಾಲೇಜ್ ಪ್ರಾಂಶುಪಾಲ ಎಸ್.ಎಸ್ ರಾಜಮಾನೆ, ಸಹಾಯಕ ಪ್ರಾದ್ಯಾಪಕ ಆಯ್.ಎಸ್ ಮಠಪತಿ, ಯುವ ಸಬಲೀಕರಣ ಸಂಯೋಜನಾಧಿಕಾರಿ ಎ.ಎ.ಮುಲ್ಲಾ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.