ವಿಜಯಪುರ: ಬಬಲೇಶ್ವರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

ಲೋಕದರ್ಶನ ವರದಿ

ವಿಜಯಪುರ 30: ಶರಣರ ಭಾಷೆ ಹಾಗೂ ನಮ್ಮೆಲ್ಲರ ಅಂತರಂಗದ ಭಾಷೆಯಾದ ಕನ್ನಡವು ಅನ್ನದ ಭಾಷೆಯಾಗಬೇಕಾದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗಾವಕಾಶಗಳು ದೊರೆಯುವಂತಾಗಬೇಕು. ಹೆಚ್ಚು-ಹೆಚ್ಚು ಕೈಗಾರಿಕೆಗಳು ತಲೆ ಎತ್ತಿ ನಿಲ್ಲಬೇಕು ಎಂದು ಹಿರಿಯ ಸಾಹಿತಿ ಭಾರತಿ ಪಾಟೀಲ ಪ್ರತಿಪಾದಿಸಿದರು.

ವಿಜಯಪುರ ಜಿಲ್ಲೆಯ ನೂತನ ತಾಲೂಕಾ ಕೇಂದ್ರ ಬಬಲೇಶ್ವರದ ಶಾಂತವೀರ ಪದವಿ-ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಗುರುವಾರ ನಡೆದ ಬಬಲೇಶ್ವರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ನಮ್ಮೆದೆಯ ಭಾಷೆಯಾಗಿದೆ. ಹೀಗಾಗಿ ಯಾವ ಭಾಷೆಯ ಪ್ರಭಾವವೂ ಕನ್ನಡದ ಅಸ್ಮಿತೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.

ಇಂಗ್ಲೀಷ್ ಕಲಿಕೆ ತಪ್ಪಲ್ಲ. ಆದರೆ ಅದರ ವ್ಯಾಮೋಹದಿಂದ ಕನ್ನಡವನ್ನು ದೂರವಿಟ್ಟವರನ್ನು ನಾವೆಂದೂ ಒಪ್ಪುವುದಿಲ್ಲ, ಕನ್ನಡ ಅಸ್ಮಿತೆಯ ವಿಷಯದಲ್ಲಿ ಯಾರೂ ಮೂಗು ತೂರಿಸುವಷ್ಟು ದೊಡ್ಡವರಲ್ಲ. ಭಾಷಾಭಿಮಾನ ಹೊತ್ತು ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡಿವೆ. ವಿಷಾದ ಏನೆಂದರೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವದಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ವಿಳಂಬನೀತಿಯಿಂದ ಕಾಯರ್ಾಚಾರಣೆ ಮುಂದಗತಿಯಲ್ಲಿ ಸಾಗಿದೆ. ಹಿಂದಿ ಭಾಷೆಯನ್ನು ಬಿಟ್ಟರೆ ಕನ್ನಡಕ್ಕೆ ಅತಿ ಹೆಚ್ಚು ಪ್ರಶಸ್ತಿಗಳು ದಕ್ಕಿವೆ ಎನ್ನುವುದು ಕನ್ನಡ ಭಾಷೆ ಸಾಹಿತ್ಯಕ್ಕಿರುವ ಸತ್ವ ಎಂಥದ್ದು ಎನ್ನುವುದನ್ನು ತೋರಿಸುತ್ತದೆ ಎಂದು ನುಡಿದರು.

ಎಲ್ಲಿ ವೃದ್ಧಾಶ್ರಮಗಳು ಹುಟ್ಟಿಕೊಂಡಿವೆಯೋ ಅಲ್ಲಿ ಶಿಕ್ಷಣದ ಸಾವು. ಇದು ಶಿಕ್ಷಣ ವ್ಯವಸ್ಥೆಯ ದೌರ್ಬಲ್ಯವಾಗಿದೆ. ಬ್ರಿಟೀಷ್ ಮಾದರಿಯ ಶಿಕ್ಷಣ ವ್ಯವಸ್ಥೆಯು ಕಾರಕೂನರನ್ನು ದಲ್ಲಾಲಿಗಳನ್ನು ಸೃಷ್ಠಿ ಮಾಡುವಲ್ಲಿ ಯಶಸ್ವಿಯಾಗಿದೆಯೇ ಹೊರತು ಜೀವನಕ್ಕೆ ಹತ್ತಿರವಾದ ಶಿಕ್ಷಣವನ್ನು ಕೊಟ್ಟಿಲ್ಲ. ಲಂಚಕೊಟ್ಟು ಡಾಕ್ಟರ್ ಶೀಟ್ ಗಿಟ್ಟಿಸಿದವರಿಂದ ರೋಗಿಗಳು ಏನನ್ನು ನಿರೀಕ್ಷೆ ಮಾಡಬಹುದು? ಎಂದು ಭಾರತಿ ಪಾಟೀಲ ಪ್ರಶ್ನಿಸಿದರು.

 ಮಹಿಳೆಯರ ಸಮಸ್ಯೆಗಳ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಅವರು, ಮಹಿಳೆಯರ ಎಲ್ಲಾ ಸಮಸ್ಯೆಗಳ ಮೂಲವೂ ಸಮಾಜ ರೂಪಿಸಿದ ಪರಿಸರದಲ್ಲಿದೆ. ವ್ಯಕ್ತಿತ್ವಕ್ಕೆ ಧಕ್ಕೆ ಬಂದರೂ ಹೊಂದಿಕೊಂಡು ಹೋಗುವುದು ನನ್ನ ಕರ್ತವ್ಯ ಎಂದು  ಆಕೆ ಅಲ್ಲಿಗೇ ನಿಂತುಬಿಟ್ಟರೆ ಗುಲಾಮಗಿರಿ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದರು.

ಯಾರದೋ ಮೆರವಣಿಗೆಯಲ್ಲಿ ಯಾರೋ ಹೊರಿಸಿದ ಕುಂಭ ಹೊರುವುದನ್ನು ಬಿಟ್ಟು ಜ್ಞಾನತುಂಬಿದ ಕುಂಭ ಹೊರೋಣ, ಮಸ್ತಕದಲ್ಲಿ ಪುಸ್ತಕಗಳನ್ನು ಇರಿಸೋಣ. ಇಂದಿನಿಂದಲೇ ನಾವೆಲ್ಲ ಮನೆಗೆ ಬಂದ ಹೆಣ್ಣುಮಕ್ಕಳಿಗೆ ಬ್ಲೌಸ್ಪೀಸ್ ಕೊಡುವುದನ್ನು  ನಿಲ್ಲಿಸಿ ಅದರ ಬದಲಾಗಿ ಪುಸ್ತಕ ಕೊಡೋಣ. ಅನಕ್ಷರಾಗಿದ್ದರೆ ಅವರಿಗೆ ಗಿಡಗಳನ್ನು ಕೊಡೋಣ. ಪುಸ್ತಕಗಳು ಧಾರ್ಮಿಕ, ಆಧ್ಯಾತ್ಮಿಕ, ರಾಜಕೀಯ, ಸಂಸ್ಕೃತಿಕ ಮೌಲ್ಯಗಳನ್ನು ಬಿತ್ತಿ ಬೆಳೆತೆಗೆವ ಕಣಜಗಳಾಗಿವೆ. ಇಂಥ ಅಮೂಲ್ಯ ಕಣಜಗಳನ್ನು ಉಳಿಸಬೇಕೋ ಅಂಗೈ ಅಗಲದ ಬ್ಲೌಜಿಗಾಗಿ ಕೈ ಕೈಚಾಚಬೇಕೋ ನೀವೇ ನಿರ್ಧರಿಸಬೇಕು ಎಂದು ಅವರು ಸಲಹೆ ನೀಡಿದರು.

ಗ್ರಂಥಾಲಯಗಳಲ್ಲಿ ಇನ್ನು ಮುಂದೆ ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ಕಾಣಿಸಿಕೊಳ್ಳಲಿ. ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲಿ. ಊರ ತುಂಬಾ ಗಿಡ ನೆಟ್ಟು ಸಸ್ಯ ಕಾಶಿಯನ್ನಾಗಿ ಮಾಡಿರಿ ಎಂದು ಹೇಳುವ ಮೂಲಕ ಪರಿಸರ ರಕ್ಷಣೆಯ ಸಂದೇಶವನ್ನು ನೀಡಿದರು. 

   ಬಬಲೇಶ್ವರದ ಇತಿಹಾಸ ಹಾಗೂ ವೈಶಿಷ್ಠ್ಯವನ್ನು ತಮ್ಮ ಸಂದೇಶದಲ್ಲಿ ಸುಧೀರ್ಘವಾಗಿ ವಿವರಿಸಿದ ಭಾರತಿ ಪಾಟೀಲ ಅವರು, ಬಬಲೇಶ್ವರ ನೆಲದಲ್ಲಿ ಜನ್ಮತಾಳಿದ ಶ್ರೀ ಶಾಂತವೀರ ಶಿವಯೋಗಿಗಳು, ಅನೇಕ ಹಿರಿಯರನ್ನು, ಸಾಹಿತಿಗಳನ್ನು ಸ್ಮರಿಸಿ ಸಾಧನೆಯನ್ನು ವಿವರಿಸಿದರು. ದಿ.ಶಂ.ಗು. ಬಿರಾದಾರ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.