ವಿಜಯಪುರ: ನೋವೆಲ್ ಕರೋನಾ ವೈರಸ್ ಕುರಿತು ಜಾಗೃತಿ

ಲೋಕದರ್ಶನ ವರದಿ

ವಿಜಯಪುರ 12: ನೋವೆಲ್ ಕರೋನಾ ವೈರಸ್ ಕುರಿತಂತೆ ಸಾರ್ವಜನಿಕರಲ್ಲಿ ಸೂಕ್ತ ಅರಿವು ಮೂಡಿಸುವುದರ ಜೊತೆಗೆ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನೋವೆಲ್ ಕರೋನಾ ವೈರಸ್ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ನೋವೆಲ್ ಕರೋನಾ ವೈರಸ್ ಬಗ್ಗೆ ಸಧ್ಯಕ್ಕೆ ಆತಂಕವಿಲ್ಲದಿದ್ದರು ಸಾರ್ವಜನಿಕರು ಸೂಕ್ತ ಎಚ್ಚರಿಕೆ, ಸ್ವಚ್ಛತೆಯನ್ನು ವಹಿಸುವ ಕುರಿತು ಅರಿವು ಮೂಡಿಸಬೇಕು. ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ ಹಾಗೂ ಬೇಧಿ ಆದ ತಕ್ಷಣ ಭಯಪಡುವ ಅಗತ್ಯವಿಲ್ಲ. ಚಿಕಿತ್ಸೆಗಾಗಿ ಸಮೀಪದ ಸಾರ್ವಜನಿಕ, ಜಿಲ್ಲಾ ಆಸ್ಪತ್ರೆಗಳಿಗೆ ಸಂಪಕರ್ಿಸಿ ಚಿಕಿತ್ಸೆ ಪಡೆಯುವ ಮೂಲಕ ಖಾತ್ರಿ ಪಡಿಸಿಕೊಳ್ಳಬಹುದೆಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ ಹಾಗೂ ಆಯಾ ತಾಲೂಕಾಸ್ಪತ್ರೆಗಳಲ್ಲಿ ತಲಾ 5 ಬೆಡ್, ಜಿಲ್ಲೆಯ ಮತ್ತು ನಗರದ ಪ್ರತಿಷ್ಠಿತ 16 ಖಾಸಗಿ ಆಸ್ಪತ್ರೆಗಳಲ್ಲಿ 146 ಬೆಡ್ಗಳ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. ತುತರ್ು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಕುರಿತು ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಸಂಶಯಾಸ್ಪದ ಪ್ರಕರಣಗಳ ಬಗ್ಗೆ ನಿಗಾ ಇಡಬೇಕು. ಸಂಶಯಾಸ್ಪದ ಪ್ರವಾಸಿಗರ ಮತ್ತು ರೋಗಿಗಳ ಬಗ್ಗೆ ನಿಗಾ ಇಡಬೇಕು. ಅವಶ್ಯಕ ಔಷಧಿ, ವೈಧ್ಯರು ಮತ್ತು ಸಿಬ್ಬಂಧಿಗಳ ನಿಯೋಜನೆ ಮಾಡಿಕೊಳ್ಳಬೇಕು. ಭಾರತೀಯ ವೈದ್ಯಕೀಯ ಸಂಘ, ಇನ್ನಿತರ ಸಂಘ ಸಂಸ್ಥೆಗಳು, ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಮೂಲಕ ಈ ವೈರಸ್ ಕುರಿತು ಜಾಗೃತಿಯನ್ನು ಮೂಡಿಸಲು ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾಆಸ್ಪತ್ರೆ, ರೈಲ್ವೆ ಇಲಾಖೆ, ಶಿಕ್ಷಣ ಇಲಾಖೆ, ಪೋಲಿಸ್, ಅರಣ್ಯ, ಪಶುಸಂಗೋಪನೆ, ನಗರ ಸ್ಥಳಿಯ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ ವ್ಯಾಪ್ತಿಯ ಇಲಾಖೆಗಳ ಮೂಲಕ ಈ ರೋಗದ ಕುರಿತು ಜಾಗೃತಿ, ಸಂಶಯಾಸ್ಪದ ರೋಗಿಗಳ ಸಮಿಕ್ಷೆ ಮತ್ತು ಮಾಹಿತಿ ಸಲ್ಲಿಕೆ, ಶುಚಿತ್ವ ನಿರ್ವಹಣೆ, ಆಹಾರ, ಶುದ್ಧ ಕುಡಿಯುವ ನೀರು ಬಳಕೆ ಕುರಿತಂತೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಅವಶ್ಯಕ ಜಾಗೃತಿ ಮೂಡಿಸಲು ಅವರು ಸಲಹೆ ನೀಡಿದರು.

ಅದರಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಸೋಂಕು ಪೀಡಿತರ ಸಂಪರ್ಕದಿಂದ ದೂರವಿದ್ದು, ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸುವುದು. ವೈಯಕ್ತಿಕ ಸ್ವಚ್ಛತೆ ಕಾಪಾಡುವುದು. ವಿಶೇಷವಾಗಿ ಆಗಾಗ ಸಾಬೂನಿನಿಂದ ಕೈತೊಳೆದುಕೊಳ್ಳಬೇಕು, ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಮತ್ತು ಕೈವಸ್ತ್ರ ಉಪಯೋಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಗಳಬಾರದು, ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈಧ್ಯರ ಸಲಹೆ ಪಡೆದುಕೊಳ್ಳಬೇಕು, ಮಾಂಸ, ಮೊಟ್ಟೆ ಇನ್ನಿತರ ಪದಾರ್ಥಗಳನ್ನು ಚನ್ನಾಗಿ ಬೇಯಿಸಿ ಉಪಯೋಗಿಸಬೇಕು. ಅಸುರಕ್ಷಿತ ವಲ್ಲದ ಕಾಡುಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬಾರದು. ಹೆಚ್ಚಿನ ಮಾಹಿತಿಗಾಗಿ 24*7 ಉಚಿತ ಆರೋಗ್ಯ ಸಹಾಯವಾಣಿ 104ಗೆ ಕರೆ ಮಾಡಬಹುದು, ಜಿಲ್ಲೆಯಲ್ಲಿ ಈವರೆಗೆ ಯಾವುದೆ ಕರೋನಾ ವೈರಸ್ ರೋಗಿಗಳ ಪತ್ತೆಯಾಗಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೆಂದ್ರ ಕಾಪ್ಸೆ ಸೇರಿದಂತೆ ಆರೋಗ್ಯ ಇಲಾಖೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.