ವಿಜಯಪುರ: ಮಮದಾಪುರ ಕೆರೆಗೆ ಸಿದ್ಧೇಶ್ವರ ಶ್ರೀಗಳ ಭೇಟಿ

ಲೋಕದರ್ಶನ ವರದಿ

ವಿಜಯಪುರ 27: ನಡೆದಾಡುವ ದೇವರೆಂದೇ ಕರೆಯಲ್ಪಡುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ  ಸಿದ್ದೇಶ್ವರ ಮಹಾಸ್ವಾಮಿಜಿಯವರು ಐತಿಹಾಸಿಕ ಮಮದಾಪುರ ಕೆರೆಗೆ ಇಂದು ಭೇಟಿ ನೀಡಿ, ತುಂಬಿದ ಕೆರೆಯನ್ನು ವೀಕ್ಷಿಸಿದರು.

ಆದಿಲ್ಶಾಹಿ ಕಾಲದಲ್ಲಿ ನಿರ್ಮಾಣಗೊಂಡ ಈ ಕೆರೆ ನೀರಿಲ್ಲದೆ ಒಣಗಿ ನಿಂತಿದ್ದಾಗ, ಸ್ವಯಂ ಪ್ರೇರಿತರಾಗಿ ಈ ಕೆರೆಗೆ ಕಾಯಕಲ್ಪ ನೀಡಿ, ಕೆರೆಯ ಹೂಳು ತೆಗೆದು ಅದನ್ನು ಒಂದುವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ತುಂಬಿಸಿದ ಎಂ.ಬಿ.ಪಾಟೀಲ್ರನ್ನು ಈ ಭಾಗದ ಜನ ಶಾಶ್ವತವಾಗಿ ನೆನೆಯುತ್ತಾರೆ ಎಂದು ಮಮದಾಪುರ ವಿರಕ್ತಮಠದ ಅಭಿನವ ಮುರುಗೇಂದ್ರ ಮಹಾಸ್ವಾಮಿಗಳು ಕೆರೆಯ ಇತಿಹಾಸವನ್ನು ಶ್ರೀಗಳಿಗೆ ವಿವರಿಸಿದರು.

ಒಂದು ಸಾವಿರ ಎಕರೆ ಪರಿಸರದಲ್ಲಿ 2ಕೆರೆಗಳು ಸುತ್ತಲು ಅರಣ್ಯ ಪ್ರದೇಶವಿದ್ದು, ಹೂಳು ತೆಗೆದು ತುಂಬಿಸಿದ್ದರಿಂದ 30ಅಡಿ ಆಳದವರೆಗೂ ಈಗ ನೀರು ನಿಂತಿದೆ. ದೊಡ್ಡ ಕೆರೆಯಿಂದ 6-8ಹಳ್ಳಿಗಳಿಗೆ, ಸಣ್ಣ ಕೆರೆಯಿಂದ 10-12ಹಳ್ಳಿಗಳ ಭೂಮಿಗೆ ಅಂತರ್ಜಲಮಟ್ಟ ಹೆಚ್ಚಳವಾಗಿ ಅನುಕೂಲವಾಗಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.

ಕಾತ್ರಾಳ ಬಾಲಗಾಂವದ ಅಮೃತಾನಂದ ಸ್ವಾಮಿಜಿ, ಜಿ.ಪಂ. ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಡಾ.ಮಹಾಂತೇಶ ಬಿರಾದಾರ, ಅಪ್ಪುಗೌಡ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.