ವಿಜಯಪುರ: ಸ್ವಂತ ಉದ್ಯಮದತ್ತ ಚಿತ್ತ ಹರಿಸಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿಕೆ

ಲೋಕದರ್ಶನ ವರದಿ                           

ವಿಜಯಪುರ 29: ರಾಜ್ಯದ ವಿವಿಧ ಜಿಲ್ಲೆಗಳಿಂದ 60ಕ್ಕೂ ಹೆಚ್ಚು ಕಂಪನಿಗಳು ಜಿಲ್ಲೆಯಲ್ಲಿ ಬಂದು, ಅನೇಕ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿದ್ದು ಸಂತಸ ತಂದಿದೆ. ಉದ್ಯೋಗ ಗಿಟ್ಟಿಸಿಕೊಂಡ ಅಭ್ಯರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಉತ್ತಮ ಅವಕಾಶ ದೊರೆತಿದ್ದು, ಸತತ ಪರಿಶ್ರಮದಿಂದ ಕಂಪನಿ ಮತ್ತು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪೂರ ಅವರು ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಐಟಿಐ ಕಾಲೇಜಿನಲ್ಲಿ ನಡೆದ ಎರಡು ದಿನಗಳ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಉದ್ಯೋಗ ಮೇಳಗಳು ಪ್ರತಿ ವರ್ಷ ಕೈಗೊಳ್ಳುವುದರಿಂದ ಜಿಲ್ಲೆಯಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಕಡಿಮೆಯಾಗಲಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸುತ್ತಿದ್ದು, ಅದಕ್ಕೆ ಸ್ಪಂದಿಸುತ್ತಿರುವ ರಾಜ್ಯದ ಎಲ್ಲಾ ಕಂಪನಿಗಳಿಗೆ ಧನ್ಯವಾದ ಕೋರುತ್ತೇನೆ ಉದ್ಯೋಗ ಎನ್ನುವುದು ಕೇವಲ ಹಣ ಗಳಿಸುವುದಾಗಲೀ, ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವುದಾಗಲಿ ಅಲ್ಲ. ಬದಲಿಗೆ ಉದ್ಯೋಗ ಎಂಬುದು ಯಶಸ್ವಿ ಪ್ರಾಮಾಣಿಕತೆಯ ಒಂದು ಭಾಗವಾಗಿದ್ದು, ಇಂದಿನ ಯುವಕರು ಉದ್ಯೋಗವನ್ನು ಸ್ವಯಂ ಉದ್ಯೋಗವನ್ನಾಗಿ ಕಾಣಬೇಕು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು, ಉತ್ತುಂಗದ ಹಾದಿಯಲ್ಲಿ ಸಾಗಿ ನಿಮ್ಮದೇ ಸ್ವಂತ ಕಂಪನಿಗಳು ತೆರೆದು ಕೊಳ್ಳುವಂತೆ ಬೆಳೆಯಬೇಕು ಎಂದು ಹೇಳಿದರು.

ಈ ಉದ್ಯೋಗ ಮೇಳದಲ್ಲಿ ಅನೇಕ ಕಂಪನಿಗಳು ವಿಶೇಷ ಚೇತನರಿಗೆ ಉದ್ಯೋಗ ಕಲ್ಪಿಸಿದ್ದು, ಈ ಉದ್ಯೋಗ ಮೇಳದಿಂದ ವಿಶೇಷ ಚೇತನರಿಗೆ ಧೈರ್ಯ ತುಂಬುವ ಕಾರ್ಯ ವಿಜಯಪುರದ ಉದ್ಯೋಗ ಮೇಳದಿಂದ ಪ್ರಾರಂಭವಾಗಿದ್ದು, ಸಂತಸದ ವಿಷಯವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಕಠಿಣ ಪರಿಶ್ರಮಿಗಳಾಗಿ ಯಶಸ್ಸಿನ ಹಾದಿಯಲ್ಲಿ ಸಾಗಿ ಎಂದು ಶುಭ ಹಾರೈಸಿದರು.

ಜಿಲ್ಲೆಗೆ ಆಗಮಿಸಿ ಅಭ್ಯಥರ್ಿಗಳನ್ನು ಆಯ್ಕೆ ಮಾಡಿದ ಎಲ್ಲಾ ಕಂಪನಿಗಳು ನಿಮ್ಮ ಬೆಳವಣಿಗೆಯ ಜೊತೆಗೆ ಅಭ್ಯಥರ್ಿಗಳ ಬೆಳವಣಿಗೆಗೆ ಸಹಕರಿಸಿ, ಅವರ ಸಾಮಥ್ರ್ಯವನ್ನು ಗುರುತಿಸಿ, ಎತ್ತರಕ್ಕೆ ಬೆಳೆಸುವ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ. ಆಯ್ಕೆಯಾಗದ ಅಭ್ಯಥರ್ಿಗಳು ಬೇಸರಗೊಳ್ಳದೆ ಮತ್ತೆ ಹೆಚ್ಚಿನ ಪ್ರಯತ್ನ ಪಟ್ಟು ಉತ್ತಮ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವಂತೆ ಪ್ರಯತ್ನಿಸಿ ಎಂದರು.

ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ ಪ್ರತಿಯೊಬ್ಬರು ಪರಿಶ್ರಮ ಪಟ್ಟು, ಉದ್ಯೋಗ ಮೇಳದಲ್ಲಿ ಭಾಗವಹಿಸಿ ಕೆಲಸ ಗಿಟ್ಟಿಸಿಕೊಂಡು, ಅಲ್ಲಿಗೆ ಸುಮ್ಮನಾಗದೆ ಅದಕ್ಕಿಂತ ಉತ್ತಮ ಹುದ್ದೆಗೇರಲು ಪ್ರಯತ್ನಿಸಬೇಕು. ಜಿಲ್ಲೆಯಲ್ಲಿ ಇನ್ನೂ ಅನೇಕ ಪ್ರತಿಭಾ ಅಭ್ಯರ್ಥಿಗಳಿದ್ದು, ಇಂತಹ ಉದ್ಯೋಗ ಮೇಳಗಳು ಹೆಚ್ಚೆಚ್ಚು ಆಯೋಜಿಸಬೇಕಿದೆ ಎಂದರು. 

ಎರಡು ದಿನಗಳ ಬೃಹತ್ ಉದ್ಯೋಗ ಮೇಳದಲ್ಲಿ ಒಟ್ಟು 9916 ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರೂ, ಅದರಲ್ಲಿ  6794 ಪುರುಷ ಅಭ್ಯರ್ಥಿಗಳು, 2172 ಮಹಿಳಾ ಅಭ್ಯರ್ಥಿಗಳು ಒಟ್ಟು 8966 ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. 1132  ಪುರುಷ ಅಭ್ಯರ್ಥಿಗಳು, 495 ಮಹಿಳಾ ಅಭ್ಯಥರ್ಿಗಳು ಒಟ್ಟು 1627 ಅಭ್ಯರ್ಥಿಗಳು ಕೆಲಸ ಗಿಟ್ಟಿಸಿ ಕೊಂಡಿದ್ದಾರೆ. 1332 ಪುರುಷ ಅಭ್ಯರ್ಥಿಗಳು, 546 ಮಹಿಳಾ ಅಭ್ಯಥರ್ಿಗಳು ಒಟ್ಟು 1878 ಅಭ್ಯರ್ಥಿಗಳನ್ನು ಕಾಯ್ದಿರಿಸಲಾಗಿದೆ. ಜೊತೆಗೆ 2180 ಪುರುಷ ಅಭ್ಯರ್ಥಿಗಳು 810 ಮಹಿಳಾ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಪಂಚಾಯತ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಉದ್ಯಮಿ ದುಂಡಪ್ಪ ಗುಡ್ಡೋಡಗಿ, ಶಿವಾನಂದ ಗುಗವಾಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ, ಮಲ್ಲಾಡಕರ್ ಸೇರಿದಂತೆ ಇತರರಿದ್ದರು.