ವಿಜಯಪುರ: ಪ್ರವಾಹ ಪರಿಹಾರ ಕ್ರಮಗಳ ಬಗ್ಗೆ ಕಾರ್ಯದರ್ಶಿ ಜೆ.ರವಿಶಂಕರ ಪರಿಶೀಲನೆ

ಲೋಕದರ್ಶನ ವರದಿ

ವಿಜಯಪುರ 19: ವಿಜಯಪುರ ಜಿಲ್ಲೆಯಲ್ಲಿ ಇತ್ತಿಚೆಗೆ ಬಂದಿದ್ದ ಪ್ರವಾಹ ಸಂದರ್ಭದಲ್ಲಿ ಜಿಲ್ಲಾ ಆಡಳಿತ ವತಿಯಿಂದ ಕೈಗೊಳ್ಳಲಾದ ವಿವಿಧ ಪರಿಹಾರ ಕಾರ್ಯಗಳ ಬಗ್ಗೆ  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ:ಜೆ.ರವಿಶಂಕರ ಇಂದು ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಆಗಷ್ಟ ಮಾಹೆಯಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಹಾನಿಗಿಡಾದ ಮನೆಗಳ ವಿವಿರ, ಪರಿಹಾರ ಧನ ವಿತರಣೆ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಇಲಾಖೆವತಿಯಿಂದ ಮೂಲ ಸೌಕರ್ಯಗಳ ಸೌಲಭ್ಯ, ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ ಕೈಗೊಂಡ ಕಾಮಗಾರಿ ಕೆ.ಆರ್.ಐ.ಡಿ.ಎಲ್. ವತಿಯಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ಸಂಪರ್ಕ ರಸ್ತೆ, ಶಾಲಾ ಕಟ್ಟಡಗಳ ದುರಸ್ತಿ, ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್. ಅನುದಾನದಡಿ ಕೈಗೊಂಡ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದ ಬೆಳೆ ಹಾನಿಗೆ ಸಂಬಂಧಪಟ್ಟಂತೆ ವಿತರಿಸಲಾದ ಪರಿಹಾರ ಧನ ಕುರಿತಂತೆ ಅಧಿಕಾರಿಗಳಿಂದ ಅವಶ್ಯಕ ಮಾಹಿತಿ ಪಡೆದರು.

ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳಿಗೆ ಸಂಬಂಧಪಟ್ಟಂತೆ ವಿತರಿಸಲಾದ ಪರಿಹಾರದ ಬಗ್ಗೆ ಪರಿಶೀಲಿಸಿದ ಅವರು, ಶಾಲಾ ಕಟ್ಟಡಗಳ ದುರಸ್ತಿಗೆ ಸಂಬಂಧಪಟ್ಟಂತೆ ಲಭ್ಯವಿರುವ ಅನುಧಾನವನ್ನು ಸಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಸದ್ಬಳಕೆ ಮಾಡಿಕೊಳ್ಳಬೇಕು. 

ಈ ಕುರಿತು ಸಂಬಂಧಪಟ್ಟ ಯೋಜನೆ ಅನುಷ್ಠಾನ ಅಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿದರ್ೇಶಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಖರ್ಚು  ವೆಚ್ಚ ವರದಿ ಸಲ್ಲಿಸಬೇಕು. 

ಪಂಚಾಯತ ರಾಜ್ ಇಂಜನೀಯರಿಂಗ್ ವಿಭಾಗದ ವತಿಯಿಂದ ಮುಂಬರುವ ಒಂದುವಾರದ ಅವಧಿಯಲ್ಲಿ  ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅನುದಾನ ಬಳಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವಾಯ್.ಎಸ್. ಪಾಟೀಲ, ಅಪರ ಜಿಲ್ಲಾಧಿಕಾರಿ ಪ್ರಸನ್ನ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪ ವಿಭಾಗಾಧಿಕಾರಿ ಸ್ನೇಹಲ್ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.