ಲೋಕದರ್ಶನ ವರದಿ
ವಿಜಯಪುರ 28: ಸರ್ಕಾರಿ ಹುದ್ದೆಗಳಿಗಾಗಿ ಪರಿಶ್ರಮ ಪಡದೆ, ನಿಮ್ಮ ಸಾಮಥ್ರ್ಯಕ್ಕನುಗುಣವಾಗಿ ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿ, ನಿಮ್ಮ ಪ್ರತಿಭೆಯಿಂದ ಸರ್ಕಾರಿ ವೇತನಕ್ಕಿಂತ ಹೆಚ್ಚು ಸಂಪಾದಿಸಬಹುದಾಗಿದೆ. ಯಾವುದೇ ಕಂಪನಿಯ ಉದ್ಯೋಗಕ್ಕೆ ಅಲೆದಾಡುವುದಕ್ಕಿಂತ ಸ್ವಂತ ಉದ್ಯೋಗಗಳಾದ ಗುಡಿ ಕೈಗಾರಿಕೆ ಸೇರಿದಂತೆ ನಾನಾ ಉದ್ಯಮಗಳನ್ನು ಮಾಡಿ "ಉದ್ಯಮಿಯಾಗು, ಉದ್ಯೋಗ ನೀಡು" ಎನ್ನುವ ಪರಿಕಲ್ಪನೆಯಲ್ಲಿ ಇಂದಿನ ಯುವಜನತೆ ಬೆಳೆಯಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಐಟಿಐ ಕಾಲೇಜ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ, ಅವರು ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಉದ್ಯೋಗ ಮಾಡಲು ಹಲವಾರು ಯೋಜನೆಗಳು ಲಭ್ಯವಿದ್ದು, ಮುದ್ರಾ ಯೋಜನೆಯಂತಹ ಉಪಯುಕ್ತವಾಗುವಂತಹ ಹಲವಾರು ಯೋಜನೆಗಳನ್ನು ಬಳಸಿಕೊಂಡು, ಸರ್ಕಾರದಿಂದ ಸಹಾಯಧನ ಪಡೆದು, ತಮ್ಮದೇ ಆದ ಸಾಮಥ್ರ್ಯದ ಮೇಲೆ ಗುಡಿ ಕೈಗಾರಿಕೆ, ಹೊಟೇಲ್ಗಳಂತಹ ಉದ್ಯೋಗಗಳನ್ನು ಮಾಡುತ್ತಾ ಮುನ್ನುಗಬೇಕು ಎಂದು ಹೇಳಿದರು.
ವಿಜಯಪುರ ಜಿಲ್ಲೆಯು ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಲು, ರಾಜ್ಯದ 70ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು ಸಂತಸ ತಂದಿದೆ. ವಿಜಯಪುರ ಜಿಲ್ಲೆಯ ಅಭ್ಯರ್ಥಿಗಳಿಗೆ ಸಾಕಷ್ಟು ಪ್ರತಿಭೆಯನ್ನು ನಾವು ಕಾಣಬಹುದಾಗಿದ್ದು, ಅವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟರೆ ನಿಮ್ಮ ಸಂಸ್ಥೆ ಹೆಚ್ಚಿನ ಬೆಳವಣಿಗೆ ಕಾಣುತ್ತದೆ. ಉತ್ತರ ಕರ್ನಾಟಕದ ಅಭ್ಯರ್ಥಿಗಳು ಪರಿಶ್ರಮದ ಸಂಕೇತವಾಗಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ನಾವು ಉತ್ತರ ಕರ್ನಾಟಕದ ಉದ್ಯೋಗಿಗಳನ್ನು ಕಾಣಬಹುದಾಗಿದೆ ಎಂದು ಹೇಳಿದರು.
25 ವರ್ಷಗಳಿಗಿಂತ ಕಡಿಮೆ ಇರುವ ಯುವಕರು ದೇಶದಲ್ಲಿ ಶೇ.50 ರಷ್ಟಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದಾಗಿದೆ. ಯುವಶಕ್ತಿಯಿಂದ ಮಾತ್ರ ದೇಶದ ಬದಲಾವಣೆ ತರಲು ಸಾಧ್ಯ, ದೇಶವನ್ನು ಬಲಾಢ್ಯ ಮಾಡಲು ಸಾಧ್ಯ ಎಂದು ವಿವೇಕಾನಂದರು ಹೇಳಿದಂತೆ ನೀವೆಲ್ಲರೂ ದೇಶವು ಉನ್ನತಿಯತ್ತ ಸಾಗುವಂತೆ ಪ್ರಯತ್ನಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಮಾತನಾಡಿ ಇಂದಿನ ಯುವಜನತೆ ಒಂದು ದೊಡ್ಡ ಗುರಿಯನ್ನು ಇಟ್ಟುಕೊಂಡಿರಬೇಕು. ಆ ಗುರಿ ಮುಟ್ಟಲು ಒಂದೇ ದಾರಿಯಲ್ಲಿ ಸಾಗದೇ ಸಿಕ್ಕ ಅವಕಾಶಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮುಂದೆ ಸಾಗಬೇಕು. ಕೇವಲ ಒಂದೇ ದಾರಿಯಲ್ಲಿ ಹೋಗದೆ, ನಿಮ್ಮ ಮುಂದೆ ಸಾಕಷ್ಟು ದಾರಿಗಳಿದ್ದು, ಒಳ್ಳೆಯ ಮಾರ್ಗ ಬಳಸಿಕೊಂಡು ಮುಂದೆ ಸಾಗಬೇಕು. ನಿಮ್ಮ ತಂದೆ ತಾಯಿಯ ಕನಸು ಈಡೇರಿಸಲು ನಿಮ್ಮ ಪ್ರಯತ್ನ ತುಂಬಾ ಅವಶ್ಯಕ ಎಂದು ಹೇಳಿದರು.
ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿವರ್ಾಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ, ಉದ್ಯಮಿ ಗುಡ್ಡೊಡಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.