ಲೋಕದರ್ಶನ ವರದಿ
ವಿಜಯಪುರ 28: 'ಮಧುಮೇಹಕ್ಕೆ ಸೈಕ್ಲಿಂಗ್ ಮದ್ದು' ಎಂಬ ಸಂದೇಶದೊಂದಿಗೆ ಇಲ್ಲಿನ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯ ಬಿ.ಎಂ.ಪಾಟೀಲ ವೈದ್ಯಕೀಯ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿರುವ ಬೆಂಗಳೂರಿನಿಂದ ವಿಜಯಪುರ ಅಹೋರಾತ್ರಿ ಸೈಕಲ್ ಯಾತ್ರೆಗೆ ಶುಕ್ರವಾರ ಬೆಂಗಳೂರಿನಲ್ಲಿ ನಗರ ಪೋಲಿಸ್ ಆಯುಕ್ತ ಭಾಸ್ಕರ್ ರಾವ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಧುಮೇಹ ಕಾಯಿಲೆಯಿಂದ ಭಾಧಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಕಾಯಿಲೆ ತಡೆಗಟ್ಟಲು ಸೈಕಲ್ ಪರಿಣಾಮಕಾರಿ ಸಾಧನವಾಗಿದೆ. ಹಿಂದೆ ನಾನು ಕೂಡಾ ಪೋಲಿಸ್ ಸಿಬ್ಬಂದಿಯೊಂದಿಗೆ ಬೀದರ-ಬೆಂಗಳೂರು, ಬೆಳಗಾವಿ-ಬೆಂಗಳೂರು ಸೈಕಲ್ ಸವಾರಿ ಹಮ್ಮಿಕೊಂಡಿದ್ದೆವು. ಆದರೆ ಇಲ್ಲಿ ಒಂದೇ ದಿನದಲ್ಲಿ 500ಕಿ.ಮೀ ಗಿಂತಲೂ ಹೆಚ್ಚು ದೂರವನ್ನು ಕ್ರಮಿಸುತ್ತಿರುವುದು ಮಹಾನ ಸಾಧನೆಯಾಗಿದೆ ಎಂದರು.
ಬಿ.ಎಲ್.ಡಿ.ಇ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಅಭಿಯಾನ ಉಸ್ತುವಾರಿ ಡಾ. ವಿಕಾಸ ದೇಸಾಯಿ, ಸೈಕ್ಲಿಸ್ಟ್ ಗಳಾದ ಪೋಲಿಸ್ ಅಧಿಕಾರಿ ಗಂಗು ಬಿರಾದಾರ, ರೈಲ್ವೇಸ್ನ ಅಧಿಕಾರಿ ವಿಜಯಸಿಂಗ್ ರಜಪೂತ, ನಿಜಪ್ಪ ಎಂಟೆತ್ತು, ಉಪಸ್ಥಿತರಿದ್ದರು.
ಬೆಂಗಳೂರಿನ ವೆಂಕಟೇಶ ಶಿವರಾಮ, ಮಾಹಿತಿ ತಂತ್ರಜ್ಞ ಮಂಜುನಾಥ ನಾಗರಾಜ, ವಿಜಯಪುರದ ಶ್ರೀಧರ ಸವಣೂರ, ಮೂವರು ಸೈಕ್ಲಿಸ್ಟ್ಗಳು ಬೆಂಗಳೂರಿನಿಂದ ಅಹೋರಾತ್ರಿ ಸೈಕಲ್ ತುಳಿದು ಶನಿವಾರ ಬೆಳಿಗ್ಗೆ 10 ಗಂಟೆಗೆ ವಿಜಯಪುರ ತಲುಪುವ ಅಂದಾಜಿದೆ. ಮಧ್ಯಾಹ್ನ 3.30ಕ್ಕೆ ಬಿ.ಎಲ್.ಡಿ.ಇ ಗ್ರಂಥಾಲಯ ಸಭಾಂಗಣದಲ್ಲಿ ಈ ಕುರಿತು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.