ಬಾಗಲಕೋಟೆ03: ಹಕ್ಕ-ಬುಕ್ಕರು ಸ್ಥಾಪಿಸಿದ ಮತ್ತು ಕೃಷ್ಣ ದೇವರಾಯ ಕಾಲದಲ್ಲಿ ಮುತ್ತು ರತ್ನಗಳ ವೈಭವದಲ್ಲಿ ಮೆರೆದ ವಿಜಯನಗರ ಸಾಮಾಜ್ಯದ ದರ್ಶನ ಭಾಗ್ಯವನ್ನು ತಾಲೂಕಿನ ಶಿಗಿಕೇರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳು ಪಡೆದರು.
ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಹಯೋಗದಲ್ಲಿ 2018-19ನೇ ಸಾಲಿನ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರದ ಹೊರ ಸಂಚಾರ ಕಾರ್ಯಕ್ರಮದಡಿಯಲ್ಲಿ ಒಂದು ದಿನದ ಹಂಪಿ ಪ್ರವಾಸ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಪ್ರವಾಸಕ್ಕೆ ಜಿಲ್ಲಾ ಪಂಚಾಯತ ಸಿಇಓ ಗಂಗೂಬಾಯಿ ಮಾನಕರ ಚಾಲನೆ ನೀಡಿ ಮಕ್ಕಳಿಗೆ ಸಿಹಿ ನೀಡಿ ಕಳುಹಿಸಿಕೊಟ್ಟಿದ್ದರು.
ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿಯ ವಿರುಪಾಕ್ಷ ದೇವಾಲಯ, ವಿಜಯ ವಿಠಲ ಮಂದಿರ, ಪುರಂದರ ಮಂಟಪ, ಕಡಲೆಕಾಳು ಗಣಪ, ಸಾಸವಿಕಾಳು ಗಣಪ, ಉರ್ಗ ನರಸಿಂಹ, ಚರ್ಕತೀರ್ಥ, ಕಮಲಭವನ, ರಾಣಿಯರ ಸ್ನಾನಗ್ರಹ, ಕುದುರೆ ಕಟ್ಟು ಮನೆ, ಮುತ್ತುರತ್ನ ವ್ಯಾಪಾರ ಬೀದಿ, ತುಂಗಬದ್ರಾನದಿ ತೀರ, ಆನೆದೀಪ ಮುಂತಾದವುಗಳನ್ನು ಕಂತ್ತುಂಬ ವೀಕ್ಷಿಸಿ ಸಂಭ್ರಮಿಸಿದರು.
ಮಕ್ಕಳ ಕೇವಲ ಪಠ್ಯದಲ್ಲಿಯೇ ಕಾಲ ಕಳೆಯದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕೂಡಾ ಭಾಗವಹಿಸಿ ಶಾರೀರಿಕವಾಗಿ, ಮಾನಸಿಕವಾಗಿ ಸದೃಡಗೊಳ್ಳಲಿ ಉದ್ದೇಶದಿಂದ ಸರಕಾರ ಈ ಯೋಜನೆಯನ್ನು ಹಾಕಿಕೊಂಡಿದ್ದು, ಶಿಗಿಕೇರಿ ಗ್ರಾಮದ ಮಕ್ಕಳು ಇದರ ಪ್ರಯೋಜನ ಪಡೆಯುವಂತಾಯಿತು. ಅಲ್ಲದೇ ಹಂಪಿಯ ವಿಜಯನಗರ ಸಾಮ್ರಾಜ್ಯದ ಬಗ್ಗೆ ಮಾರ್ಗದರ್ಶಕರಿಂದ ತಿಳಿಸಿಕೊಡಲಾಯಿತು.
ಪ್ರವಾಸದಲ್ಲಿ ಶಿಗಿಕೇರಿ ಗ್ರಾಮದ 45 ಶಾಲಾ ಮಕ್ಕಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಜಯಮಾಲಾ ದೊಡಮನಿ, ಶಾಲೆಯ ಮುಖ್ಯ ಗುರುಗಳು ಆರ್.ಜಿ.ಮುಲ್ಲಾ, ದೈಹಿಕ ಶಿಕ್ಷಕ ಹಳ್ಳದ, ಮಹಿಳಾ ಶಕ್ತಿ ಕೇಂದ್ರದ ಸಿಬ್ಬಂದಿಗಳಾದ ರಷ್ಮೀ ಮೇತ್ರಿ, ಕಮಲಾಕ್ಷಿ ಚವ್ಹಾಣ, ಜ್ಯೋತಿ ಕುಡಚಿಕರ ಸೇರಿದಂತೆ ಇತರರು ಇದ್ದರು.
ಪ್ರವಾಸದ ಹೊರಡುವ ಹಿಂದಿನ ದಿನ ಪ್ರವಾಸಕ್ಕೆ ಆಯ್ಕೆಯಾದ ಶಾಲಾ ಮಕ್ಕಳಿಗೆ ಜಿ.ಪಂ ಸಿಇಓ ಅವರ ನಿವಾಸದಲ್ಲಿ ಊಟದ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಿಇಓ ಅವರ ಮನೆ ಹಬ್ಬದ ವಾತಾವರಣದಂತೆ ಕಂಗೊಳಸಲಾಗಿತ್ತು.
ಮಕ್ಕಳನ್ನು ಸ್ವತಃ ಸಿಇಓ ಅವರು ಸ್ವಾಗತ ಕೋರಿ ಪ್ರತಿಯೊಂದು ಮಕ್ಕಳ ಪರಿಚಯ ಮಾಡಿಕೊಂಡು ಮಕ್ಕಳ ಹಕ್ಕುಗಳ ಬಗ್ಗೆ, ಶೌಚಾಲಯ ನಿಮರ್ಾಣ, ಸ್ವಚ್ಛತೆಯ ಜೊತೆಗೆ ಐ.ಎ.ಎಸ್ ಅಧಿಕಾರಿಗಳಾಗಲು ಈಗಿನಿಂದಲೇ ಹೇಗೆ ಸಿದ್ದರಾಬೇಕೆಂಬುದನ್ನು ತಿಳಿಸಿಕೊಟ್ಟರು. ನಿವಾಸದಲ್ಲಿ ಮಕ್ಕಳೊಂದಿಗೆ ಹಾಡಿ ಕುಣಿದರು. ಕೆಲಕಾಲ ಮಕ್ಕಳೊಂದಿಗೆ ಕಾಲ ಕಳೆದರು.