ಬೆಂಗಳೂರು, ಅ.16: ವಿಜಯ ಹಜಾರೆ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆತಿಥೇಯ ಕರ್ನಾಟಕ ತಂಡದ ಸಂಘಟಿತ ದಾಳಿಗೆ ನಲುಗಿದ ಗೋವಾ 171 ರನ್ ಗಳಿಗೆ ಸರ್ವ ಪತನ ಹೊಂದಿದೆ.
ಮೊದಲು ಬ್ಯಾಟ್ ಮಾಡಿದ ಗೋವಾ ತಂಡದ ಆರಂಭಿಕ ಆದಿತ್ಯ ಕೌಶಿಕ್ ಅವರನ್ನು ಹೊರತು ಪಡಿಸಿದರೆ, ಉಳಿದ ಯಾವ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ಸಫಲರಾಗಲಿಲ್ಲ. ಪರಿಣಾಮ ಪ್ರವಾಸಿ ತಂಡ 47.5 ಓವರ್ ಗಳಲ್ಲಿ 171 ರನ್ ಗಳಿಗೆ ಆಲೌಟ್ ಆಯಿತು.
ಕರ್ನಾಟಕದ ತಂಡದ ಪರ ವರ್ಷಗಳ ಕಾಲ ಆಡಿದ ಅನುಭವ ಹೊಂದಿರುವ ಸಿಎಂ ಗೌತಮ್ 17 ಹಾಗೂ ಅಮಿತ್ ವರ್ಮಾ 10 ರನ್ ಬಾರಿಸಿದರು. ಉಳಿದಂತೆ ಕೆಳ ಮಧ್ಯಮ ಕ್ರಮಾಂಕದಲ್ಲಿ ದರ್ಶನ್ ಮಿಸಳ್ 76 ಎಸೆತಗಳಲ್ಲಿ 33 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು.
ಆರಂಭಿಕ ಆದಿತ್ಯ 86 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 75 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.
ಕರ್ನಾಟಕದ ಪರ ಸ್ಪಿನ್ ಬೌಲರ್ ಗಳು ಕಮಾಲ್ ಪ್ರದರ್ಶನ ನೀಡಿದರು. ಪ್ರವೀಣ್ ದುಬೆ 29 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಜೆ.ಸುಚಿತ್ ಹಾಗೂ ಅಭಿಮನ್ಯು ಮಿಥುನ್ ತಲಾ ಎರಡು ವಿಕೆಟ್ ಪಡೆದರು.