ಬೀಳಗಿ 16: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ಬನಶಂಕರಿದೇವಿ ವಿದ್ಯಾ ಸಂಸ್ಥೆ ಪ್ರಾರಂಭಿಸಿರುವ ಬಸವರಾಜ ಖೋತ ಅವರಿಗೆ, ಶಿಕ್ಷಣ ಕ್ಷೇತ್ರದ ಮೇಲೆ ಅತಿಹೆಚ್ಚು ಪ್ರೀತಿ ಇದೆ ಎಂದು ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಶ್ರೀ ಬನಶಂಕರಿದೇವಿ ವಿದ್ಯಾ ಸಂಸ್ಥೆಯ ಬಿ. ಎನ್. ಖೋತ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ, ಬಿ. ಎನ್. ಖೋತ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಜಯ ವಿಕ್ರಮ ಉತ್ಸವ-2025ರ ಸಾನ್ನಿಧ್ಯ ವಹಿಸಿ ಮಾತನಾಡಿ, ಶೈಕ್ಷಣಿಕ ಸಾಧನೆ ಹಿಂದೆ ಖೋತವರ ಬಹುದೊಡ್ಡ ಶ್ರಮವಿದೆ ಎಂದು ಹೇಳಿ, ಈ ವಿದ್ಯಾ ಸಂಸ್ಥೆಯಲ್ಲಿ ಕಲಿತ ಮಕ್ಕಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್. ಎಸ್. ಪಟ್ಟಣಶೆಟ್ಟಿ ಮಾತನಾಡಿ, ವಿಜಯ ವಿಕ್ರಂ ಉತ್ಸವವನ್ನು ಸಾಂಸ್ಕೃತಿಕ ಹಬ್ಬದಂತೆ ಸಡಗರ, ಸಂಭ್ರಮದಿಂದ ಆಚರಿಸುತ್ತಿರುವುದು ಸಂತೋಷ ತಂದಿದೆ. ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಕೊಟ್ಟ ಸಂಸ್ಥೆ ಇದಾಗಿದ್ದು, ಬನಶಂಕರಿ ವಿದ್ಯಾ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮನುಷ್ಯನಿಗೆ ಜ್ಞಾನ ಎನ್ನುವುದು ಬಹಳ ಮುಖ್ಯವಾದದ್ದು, ವಿದ್ಯೆ ಜೀವನಕ್ಕೆ ಮೋಕ್ಷವನ್ನು ಕೊಡತಕ್ಕಂತದ್ದು. ಜ್ಞಾನದ ಜ್ಯೋತಿಯನ್ನು ಈ ಸಂಸ್ಥೆ ಬೆಳಗುತ್ತಿದೆ. ನಿರ್ಗತಿಕರ, ಬಡವರ, ದೀನ ದಲಿತರ ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕಾಗಿ ಜೀವನ ಮುಡುಪಿಟ್ಟ ಬಸವರಾಜ ಖೋತ ಅವರಿಗೆ ಶುಭ ಕೋರಿದರು.
ಬನಶಂಕರಿದೇವಿ ವಿದ್ಯಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಖೋತ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರುವ ಜೂನ್‌ದಿಂದ ಬಿಸಿಎ ಡಿಗ್ರಿ ಕಾಲೇಜು ಪ್ರಾರಂಭವಾಗಲಿದೆ. ಇಲ್ಲಿನ ಬೋಧಕ ವೃಂದದ ಪ್ರಾಮಾಣಿಕ ಸೇವೆಯಿಂದ ನಮ್ಮ ಸಂಸ್ಥೆ ಜಿಲ್ಲೆಯಲ್ಲಿ 2ನೇ ರಾ್ಯಂಕ ಪಡೆಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸಿಬ್ಬಂದಿ ಹಗಲು ರಾತ್ರಿಯನ್ನದೇ ಶ್ರಮಿಸುತ್ತಿದೆ. ಸಂಸ್ಥೆ ವರ್ಷದಿಂದ ವರ್ಷಕ್ಕೆ ಹೆಮ್ಮರವಾಗಿ ಬೆಳೆಯುತ್ತಿರುವುದರಿಂದ ತಮ್ಮೆಲ್ಲರ ಸಹಾಯ ಸಹಕಾರ ಇರಲೆಂದು ವಿನಂತಿಸಿದರು.
ನ್ಯಾಯವಾದಿ ಎನ್. ಬಿ. ಬನ್ನೂರ ಮಾತನಾಡಿ, ಕದಿಯಲು ಸಾಧ್ಯವಿಲ್ಲದ್ದರಿಂದ ವಿದ್ಯೆ ದೊಡ್ಡ ಸಂಪತ್ತು. ಶ್ರೀಮಂತಿಕೆ ಶಾಶ್ವತವಲ್ಲ. ತಂದೆ-ತಾಯಿಗಳು ಎಷ್ಟೇ ಕಷ್ಟಬಂದರೂ ಮಕ್ಕಳಿಗೆ ಒಳ್ಳೆಯ ವಿದ್ಯೆ ಕೊಡಿಸಬೇಕು. ಮಕ್ಕಳ ಬಗ್ಗೆ ಪಾಲಕರ ಗಮನವಿರಲಿ. ಮಕ್ಕಳಿಗೆ ಸಂಸ್ಕಾರ, ದೇಶಭಕ್ತಿಯನ್ನು ತುಂಬುವುದರ ಜೊತೆಗೆ ಸ್ವಾಭಿಮಾನದಿಂದ ಬದುಕುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಚಾರ್ಯ ಸುರೇಶ ಹವಾಲ್ದಾರ ಪ್ರಾಸ್ತಾವಿಕ ನುಡಿ ಹೇಳಿದರು. ಮಕ್ಕಳ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳು ನೆರೆದ ಪಾಲಕರ ಗಮನ ಸೆಳೆದವು.
ನಿರ್ದೇಶಕರಾದ ಶೋಭಾ ಖೋತ, ವಿಕ್ರಂಕುಮಾರ ಖೋತ, ವಿಜಯಕುಮಾರ ಖೋತ, ಕಾರ್ಯದರ್ಶಿ ಆಯ್. ಎಸ್. ಗೋಡಿ, ಬಸವರಾಜ ಬಡಿಗೇರ, ಅನೀಲ ಕೋರಿ, ಸೀತಾ ಜೋಶಿ, ವಿನಯ ಶೀಲವಂತ, ರಿಯಾನಾ ಗಬ್ಬೂರ ಇತರರು ಇದ್ದರು.