ನವದೆಹಲಿ, ಜೂನ್ ೩, ದೇಶದಿಂದ ಪರಾರಿಯಾಗಿರುವ ಪ್ರಮುಖ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರ ವೃತ್ತಾಂತ ಅಂತಿಮ ಘಟ್ಟಕ್ಕೆ ತಲುಪಿದಂತೆ ಕಾಣುತ್ತಿದೆ. ಸರ್ಕಾರಿ ಸ್ವಾಮ್ಯದ ಭಾರತೀಯ ಬ್ಯಾಂಕುಗಳಿಗೆ ೯ ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಸಾಲ ಮರುಪಾವತಿಸದೆ ಬ್ರಿಟನ್ ಗೆ ಪರಾರಿಯಾಗಿರುವ ಅವರನ್ನು ಯಾವುದೇ ಕ್ಷಣದಲ್ಲಾದರೂ ಭಾರತಕ್ಕೆ ಕರೆತರುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.ತಮ್ಮನ್ನು ಭಾರತಕ್ಕೆ ಹಸ್ತಾಂತರಿಸಬಾರದು ಎಂದು ವಿಜಯ್ ಮಲ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ಬ್ರಿಟನ್ ಸುಪ್ರೀಂ ಕೋರ್ಟ್ ಮೇ ೧೪ ರಂದು ವಜಾಗೊಳಿಸಿರುವ ಕಾರಣ ಅವರಿಗೆ ಕಾನೂನು ಪರಿಹಾರ ಪಡೆದುಕೊಳ್ಳುವ ಎಲ್ಲ ಮಾರ್ಗಗಳು ಬಂದ್ ಆಗಿವೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬ್ರಿಟನ್ ಹಣಕಾಸು ಸಚಿವೆ ಪ್ರೀತಿ ಪಟೇಲ್ ಸಹಿ ಹಾಕಿದ ನಂತರ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ.ಮಲ್ಯ ಅವರನ್ನು ೨೮ ದಿನಗಳಲ್ಲಿ ಭಾರತ ಹಸ್ತಾಂತರಿಸಿಕೊಳ್ಳಬೇಕು ಎಂದು ಮೋದಿ ಸರ್ಕಾರ ಯೋಜಿಸಿತ್ತು. ಈಗಾಗಲೇ ೨೦ ದಿನಗಳು ಮುಗಿದಿದ್ದು, ಮಲ್ಯ ಅವರನ್ನು ಯಾವಾಗ ಭಾರತಕ್ಕೆ ಕರೆತರಲಾಗುತ್ತದೆ ಎಂಬ ನಿಖರ ಸಮಯ ನೀಡಲು ಅವರು ನಿರಾಕರಿಸಿದ್ದಾರೆ. ವಿಜಯ್ ಮಲ್ಯ ವಿರುದ್ದ ಮುಂಬೈನಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಲಂಡನ್ ನಿಂದ ನೇರವಾಗಿ ಮುಂಬೈಗೆ ಕರೆತರಲಾಗುತ್ತದೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.