ಆಂಧ್ರದಿಂದ ಜನರು ರಾಜ್ಯದ ಗಡಿ ನುಸುಳದಂತೆ ತೀವ್ರ ನಿಗಾ: ಜಿಲ್ಲಾಧಿಕಾರಿ ನಕುಲ್

ಬಳ್ಳಾರಿ, ಮೇ 3,ಕೊರೊನಾ ಪ್ರಕರಣಗಳು ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ್  ಜಿಲ್ಲೆಗಳಲ್ಲಿ ದಿನೇದಿನೇ ಹೆಚ್ಚಾಗುತ್ತಿದ್ದು, ಈ ರಾಜ್ಯದ ಗಡಿ ಭಾಗದಿಂದ ಆಂಧ್ರದ  ವ್ಯಕ್ತಿಗಳು ಬಳ್ಳಾರಿ ಜಿಲ್ಲೆಯಲ್ಲಿ ಪ್ರವೇಶಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಜನರು  ನುಸುಳದಂತೆ ಕ್ರಮವಹಿಸುವ ಮತ್ತು ತೀವ್ರ ನಿಗಾವಹಿಸುವ ನಿಟ್ಟಿನಲ್ಲಿ  ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್  ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿ  ಜಿಲ್ಲೆಯ ಸಿರುಗುಪ್ಪ, ಬಳ್ಳಾರಿ ಮತ್ತು ಸಂಡೂರು ತಾಲ್ಲೂಕುಗಳ ಗಡಿ ಭಾಗಗಳಿಗೆ  ಆಂಧ್ರಪ್ರದೇಶ ರಾಜ್ಯದ ಗಡಿ ಭಾಗ ಹೊಂದಿಕೊಂಡಿವೆ. ಆಂಧ್ರಪ್ರದೇಶ ರಾಜ್ಯದ ಜಿಲ್ಲೆಗಳಾದ  ಕರ್ನೂಲ್ ಮತ್ತು ಅನಂತಪುರಂ ಜಿಲ್ಲೆಗಳಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದೃಢಪಟ್ಟ  ಕಾರಣ ಈ ಜಿಲ್ಲೆಗಳ ಗಡಿ ಭಾಗದಿಂದ ಆಂಧ್ರದ ವ್ಯಕ್ತಿಗಳು ಬಳ್ಳಾರಿ ಜಿಲ್ಲೆಯಲ್ಲಿ  ಪ್ರವೇಶಿಸುವ ಮತ್ತು ಈ ಸೊಂಕು ಹರಡಿಸುವ ಸಾಧ್ಯತೆಗಳೂ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ  ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಯಾವುದೇ ವ್ಯಕ್ತಿ  ಬಳ್ಳಾರಿ ಜಿಲ್ಲೆಯ ಗಡಿ ಪ್ರದೇಶದಿಂದ ಪ್ರವೇಶಿಸದಂತೆ ನಿಗಾವಹಿಸುವ ನಿಟ್ಟಿನಲ್ಲಿ  ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನು ಇದಕ್ಕಾಗಿ ನೇಮಿಸಲಾಗಿದ್ದು, ಅವರು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಮತ್ತು  ಒಂದು ವೇಳೆ ಯಾವುದೇ  ವ್ಯಕ್ತಿ ಈ ರೀತಿ ಗಡಿ ಪ್ರದೇಶದಿಂದ ಪ್ರವೇಶಿಸಿದ್ದಲ್ಲಿ ಕೂಡಲೇ ಮೇಲಾಧಿಕಾರಿಗಳ  ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.
ಸಾರ್ವಜನಿಕರ  ಆರೋಗ್ಯದೃಷ್ಟಿಯಿಂದ ಆಂಧ್ರಪ್ರದೇಶ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಸಿರುಗುಪ್ಪ,  ಬಳ್ಳಾರಿ ಮತ್ತು ಸಂಡೂರು ತಾಲ್ಲೂಕುಗಳ ಗಡಿ ಭಾಗದಲ್ಲಿ ಪ್ರತಿನಿತ್ಯ ನಿರಂತರ 24  ಗಂಟೆಗಳ ಕಾಲ ಗಸ್ತುವಾಹನಗಳು ಸಂಚರಿಸಿ ನಿಗಾವಹಿಸಲಿವೆ ಎಂದು ವಿವವರಿಸಿದ ಡಿಸಿ ನಕುಲ್  ಅವರು,  ಬಳ್ಳಾರಿ-29, ಸಿರಗುಪ್ಪ-27 ಮತ್ತು ಸಂಡೂರು-10 ಗ್ರಾಮಗಳು ಆಂಧ್ರದೊಂದಿಗೆ  ಗಡಿಹಂಚಿಕೊಂಡಿವೆ ಎಂದರು.
ಬಳ್ಳಾರಿ ತಾಲೂಕಿಗೆ ಪಂಚಾಯತ್‍ರಾಜ್  ಎಂಜನಿಯರಿಂಗ್ ವಿಭಾಗದ ಎಇಇ ಪ್ರಸನ್ನ, ಸಿರಗುಪ್ಪ ತಾಲೂಕಿಗೆ ಹಿಂದುಳಿದ ವರ್ಗಗಳ ಮತ್ತು  ಅಲ್ಪಸಂಖ್ಯಾತ ವಿಸ್ತರಣಾ ಅಧಿಕಾರಿ ಶ್ಯಾಮಪ್ಪ ಹಾಗೂ ಸಂಡೂರು ತಾಲೂಕಿಗೆ ಬಿಇಒ  ಐ.ಆರ್.ಅಕ್ಕಿ ಅವರನ್ನು ತಾಲೂಕುಮಟ್ಟದ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.  ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳನ್ನಾಗಿ ಬಳ್ಳಾರಿ ಗ್ರಾಮೀಣ ವಿಭಾಗದ ಡಿವೈಎಸ್ಪಿ  ಅರುಣಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ಅವರು ವಿವರಿಸಿದರು.ಅಂತರ್  ಜಿಲ್ಲೆ ಮತ್ತು ಅಂತರ್ ರಾಜ್ಯದಿಂದ ಸರ್ಕಾರಿ ಬಸ್‍ಗಳಲ್ಲಿ ಬಳ್ಳಾರಿಗೆ ಬರುವ ವಲಸಿಗರು  ಮತ್ತು ಕಾರ್ಮಿಕರಿಗೆ ಬಳ್ಳಾರಿ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಖಾನಹೊಸಳ್ಳಿ  ಚೆಕ್‍ಪೋಸ್ಟ್‌ಗಳಲ್ಲಿ ಕರೆತರುವುದು. ಅಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಊಟದ  ವ್ಯವಸ್ಥೆಗಳ ಮಾಡುವಂತೆ ಡಿಸಿ ನಕುಲ್ ಅವರು ಸೂಚನೆ ನೀಡಿದರು.ಬರುವ  ವಲಸಿಗರಿಗೆ ಇರುವ ಲಕ್ಷಣಗಳನ್ನು  ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಪಾಸಣೆಯನ್ನು ನಡೆಸಿ  ಮತ್ತು ನಿಗದಿತ ನಮೂನೆಯಲ್ಲಿ ವಿವರಗಳನ್ನು ದಾಖಲಿಸಿ ತದನಂತರ ವಲಸಿಗರ ಕೈಗೆ ಹೋಂ  ಕ್ವಾರಂಟೈನ್ ಸೀಲ್ ಹಾಕುವುದು. ನಂತರ ಅವರವರ ಊರುಗಳಿಗೆ ವಲಸಿಗರನ್ನು ಕರೆದೊಯ್ಯುವ  ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ಆಂಧ್ರದ ಅನಂತಪುರ  ಮತ್ತು ಕರ್ನೂಲ್ ಜಿಲ್ಲೆಗಳಿಂದ ತುರ್ತುಚಿಕಿತ್ಸೆಗಾಗಿ ಬಳ್ಳಾರಿಗೆ ಬರುತ್ತಿರುವವರಿಗೆ  ಅಲ್ಲಿನ ಜಿಲ್ಲಾಡಳಿತಗಳು ನೀಡಿದ ಪಾಸ್ ಇದ್ದರಷ್ಟೇ ಬಳ್ಳಾರಿ ಬರುವುದಕ್ಕೆ ಅನುಮತಿ  ನೀಡಲಾಗುತ್ತಿದ್ದು,ಇದಕ್ಕೆ ಸಂಬಂಧಿಸಿದಂತೆ ಉಭಯ ಜಿಲ್ಲೆಗಳ ಜಿಲ್ಲಾ  ಕಲೆಕ್ಟರ್‍ಗಳೊಂದಿಗೆ ಚರ್ಚಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್, ಅಪರ  ಜಿಲ್ಲಾಧಿಕಾರಿ ಮಂಜುನಾಥ, ಪ್ರೊಬೆಷನರಿ ಐಎಎಸ್ ಈಶ್ವರ್ ಕಾಂಡೂ ಸೇರಿದಂತೆ ವಿವಿಧ  ಇಲಾಖೆಗಳ ಅಧಿಕಾರಿಗಳು ಇದ್ದರು.