ಧಾರವಾಡ 15: ನಾಡಿನ ಹಿರಿಯ ಸಂಸ್ಥೆಯಾದ ವಿದ್ಯಾವರ್ಧಕ ಸಂಘವು ಕನ್ನಡದ ಭದ್ರ ನೆಲೆ ಹಾಗೂ ಸೆಲೆಯಾಗಿದೆ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬರುತ್ತಿದೆ ಎಂದು ಇಲ್ಲಿಯ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಂಜಲೀ ಸಾಳುಂಕೆ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀ ಎಸ್. ವ್ಹಿ. ನಾಯ್ಕ ರಾಣೆ ಕುಟುಂಬದ ದತ್ತಿ ಅಂಗವಾಗಿ ಅವರ 82 ನೇ ಜನ್ಮದಿನಾಚರಣೆ ಹಾಗೂ ‘ಹಾಂವ ಅನಿ ಅಮಗೇಲೋ ಪರಿಸರ’ ಕೊಂಕಣಿ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅತಿಥಿಯಾಗಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಕೊಂಕಣ ಮರಾಠಾ ಸಮಾಜವು ಚಿಕ್ಕದಾದರೂ ಚೊಕ್ಕವಾಗಿದೆ. ಅದು ನ್ಯಾಯಪರ ಮತ್ತು ಕಷ್ಟಪಟ್ಟು ದುಡಿಯುವ ಸಮಾಜವಾಗಿದೆ. ಅದು ಕನ್ನಡದೊಂದಿಗೆ ಬೆರೆತುಕೊಂಡಿದೆ. ನಾವು ಎಲ್ಲಿ ಇರುತ್ತೇವೆಯೋ ಅಲ್ಲಿಯ ಪರಿಸರದೊಂದಿಗೆ ಹೊಂದಿಕೊಂಡು ಸೌಹಾರ್ದತೆಯಿಂದ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅನೇಕ ರಂಗಗಳಲ್ಲಿ ತಮ್ಮದೇ ಆದ ಸಾಮಾಜಿಕ ಸೇವೆ ಸಲ್ಲಿಸಿದ ಸಾಧಕರಾದ ಸಮಾಜ ಸೇವಕರು ಹಾಗೂ ಕ್ಷತ್ರಿಯ ಮರಾಠಾ ಮಹಾ ಮಂಡಳ ಜಿಲ್ಲಾ ಉಪಾಧ್ಯಕ್ಷರಾದ ಪುರುಷೋತ್ತಮ ವಿ. ಸಾವಂತ ಹಾಗೂ ನಿವೃತ್ತ ಪ್ರಾಧ್ಯಾಪಕರು ಹಾಗೂ ಹಿರಿಯ ಗ್ರಂಥಪಾಲಕರಾದ ಮಹಾಂತೇಶ ರೇವಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಇರ್ವರು, ಸಮಾಜಸೇವೆ ಹುದ್ದೆಯಲ್ಲ. ಸಮಾಜ ಸೇವೆಯಲ್ಲಿ ತೊಡಗಿಕೊಂಡು ಸೇವೆ ಸಲ್ಲಿಸುವುದರಿಂದ ಸಿಗುವ ತೃಪ್ತಿಗೆ ಬೆಲೆ ಕಟ್ಟಲಾಗದು. ಹಣ ಖರ್ಚು ಮಾಡಿ, ಮಾಡುವ ಸೇವೆ ಮಾತ್ರ ಸಮಾಜ ಸೇವೆಯಲ್ಲ. ಸರಕಾರದಿಂದ ದೊರೆಯುವ ಸೌಲಭ್ಯಗಳ ಅರಿವು ಹಾಗೂ ಜಾಗೃತೆ ಮೂಡಿಸುವ ಜನಪರ ಮುಂತಾದ ಸಮಾಜಮುಖಿ ಸೇವೆಗಳೂ ಸಹ ಸಮಾಜ ಸೇವೆ. ಕೇವಲ ನಮಗಾಗಿ ನಾವು ಬದುಕದೇ ಇತರರಿಗಾಗಿಯೂ ಬದುಕಬೇಕು ಎಂದ ಅವರುಗಳು, ಎಸ್. ವ್ಹಿ. ನಾಯ್ಕ ರಾಣೆ ಅವರೊಬ್ಬ ಪ್ರಾಮಾಣಿಕ, ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಮಗೆ ಮಾದರಿಯಾಗಿದ್ದಾರೆ. ಅಂಥವರ ಹೆಸರಿನ ಕಾರ್ಯಕ್ರಮದಲ್ಲಿ ದೊರೆತ ಈ ಗೌರವ ನಮಗೆ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ಪ್ರೇರಣೆ ನೀಡಿದೆ ಎಂದು ಕತೃಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಕೇಂದ್ರಬಿಂದು ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಸ್. ವ್ಹಿ. ನಾಯ್ಕ ರಾಣೆ ಪ್ರಾಸ್ತಾವಿಕವಾಗಿ ಮಾಡತನಾಡಿ, ಲಿಪಿ ಇಲ್ಲದ ತಮ್ಮ ಮಾತೃ ಭಾಷೆ ಕೊಂಕಣಿಯ ಪುಸ್ತಕವನ್ನು ಕನ್ನಡ ಲಿಪಿ ಮೂಲಕ ಹೊರತರಲು ಸಹಕರಿಸಿದವರನ್ನು ಸ್ಮರಿಸಿ, ವಿಶೇಷವಾಗಿ ಈ ಪುಸ್ತಕವನ್ನು ಸಂಘವು ಬಿಡುಗಡೆಗೊಳಿಸಿದ್ದಕ್ಕೆ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.
ಕ.ವಿ.ವ.ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್. ವ್ಹಿ. ನಾಯ್ಕ ರಾಣೆಯವರೊಬ್ಬ ಪರಿಸರ ಪ್ರೇಮಿ, ಇವರು ಕೊಂಕಣಿ ಲೇಖನಗಳನ್ನು ಪ್ರಕಟಿಸಿದವರು. ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಇವರು ಇತರರ ಸಮಾಜ ಸೇವೆ ಹಾಗೂ ಸಾಧನೆಗಳನ್ನು ಗುರುತಿಸಿ, ಗೌರವಿಸಿ ಪ್ರೇರೇಪಿಸುವ ಮೌಲ್ಯಯುತ ಗುಣದವರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಎಸ್. ವ್ಹಿ. ನಾಯ್ಕ ರಾಣೆ ಅವರನ್ನು ಅವರ 82 ನೇ ಜನ್ಮದಿನಾಚರಣೆ ದಿನಾಚರಣೆ ನಿಮಿತ್ತ ಹು-ಧಾ ಕೊಂಕಣ ಮರಾಠಾ ಸಮಾಜದ ಅಧ್ಯಕ್ಷ ರವಿ ನಾಯ್ಕ ಹಾಗೂ ಪದಾಧಿಕಾರಿಗಳು ಹಾಗೂ ಮತ್ತಿತರರು ದಂಪತಿಗಳ ಸಮೇತ ಸನ್ಮಾನಿಸಿ ಶುಭ ಕೋರಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಶಂಕರ ಕುಂಬಿ ನಿರ್ವಹಿಸಿದರು. ಡಾ. ಶೈಲಜಾ ಅಮರಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಸುಪ್ರಿಯಾ ಸಾವಂತ, ಶೃತಿ ನಾಯ್ಕ, ಗಜಾನನ ಕುಮಾಟಕರ, ಅಶೋಕ ರಾಣೆ, ಸುನಿಲ ರಾಣೆ ಹಾಗೂ ಸಮಾಜ ಬಾಂಧವರು, ಕುಟುಂಬದವರು, ಅಭಿಮಾನಿಗಳು ಮತ್ತಿತರರು ಭಾಗವಹಿಸಿದ್ದರು.