ಮುಂಬೈ 24 ಆಗಸ್ಟ್ ವಿಭಿನ್ನ ಕಥೆಗಳುಳ್ಳ ಮಹಿಳಾ ಪ್ರದಾನ ಚಿತ್ರಗಳಲ್ಲಿ ನಟಿಸಿ ತಮ್ಮದೇ ಛಾಪನ್ನು ಮೂಡಿಸಿದ ಬಾಲಿವುಡ್ ನಟಿ ವಿದ್ಯಾ ಬಾಲನ್ ಈಗ ಮಾನವ ಕಂಪ್ಯೂಟರ್ ಎಂಬ ಖ್ಯಾತಿಯ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ. ವಿದ್ಯಾ ಅಭಿನಯದ 'ಮಿಷನ್ ಮಂಗಲ್' ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಇಸ್ರೋ ವಿಜ್ಞಾನಿ ಅವರು ಕಾಣಿಸಿಕೊಂಡಿದ್ದರು. ಈಗ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿ ಪಾತ್ರಕ್ಕೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾ,ಇಂತಹ ಅದ್ಭುತ ಪಾತ್ರಕ್ಕಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ. ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಲು ಬಾಬ್ ಕಟ್ ಮಾಡಿಸಿಕೊಳ್ಳುತ್ತಿದ್ದೇನೆ. ಕರ್ಲ್ ಬಾಬ್ ಕೂದಲು ಹಾಗೂ ಸಾಂಪ್ರದಾಯಿಕ ದಕ್ಷಿಣ ಭಾರತದ ಮುಖ ಈ ಪಾತ್ರಕ್ಕೆ ಉತ್ತಮ ಹೊಂದಾಣಿಕೆಯಾಗಿದೆ ಎಂದು ತಿಳಿಸಿದ್ದಾರೆ. ಶಕುಂತಲಾ ದೇವಿ ಅವರ ಆಕರ್ಷಕ ವೈಕ್ತಿತ್ವ ಹಾಗೂ ಅವರ ಜೀವನ ನನ್ನನ್ನು ಹೆಚ್ಚಾಗಿ ಸೆಳೆದಿದೆ. 20 ನೇ ವಯಸ್ಸಿನಿಂದ ಹಿಡಿದು ವೃತ್ತಿಜೀವನದ ಕೊನೆಯವರೆಗಿನ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.