ಸತ್ಯದ ಜಯ

ಸತ್ಯ ಮತ್ತು ಅಸತ್ಯ ಎನ್ನುವದು ಒಂದು ನಾಣ್ಯದ ಎರಡು ಮುಖಗಳು. ಒಂದೇ ಮನುಷ್ಯನಲ್ಲಿ ಅದನ್ನು ನಾವು ಕಾಣಬಹುದು. ಸತ್ಯಹರಿಶ್ಚಂದ್ರನಂತೆ ಜೀವನದಲ್ಲಿ ಸುಳ್ಳು ಹೇಳದೆ ಬದುಕುತ್ತೇನೆ ಎಂದು ಹೇಳಿಕೊಂಡರೂ ಅರಿವಿಗೆ ಬಾರದೆಯೇ ಅಥವಾ ಸಂದರ್ಭಾನುಸಾರವಾಗಿ ಸುಳ್ಳು ಹೇಳಲೇ ಬೇಕಾಗಿ ಒದಗಿ ಬರುವುದು ಉಂಟು. ಸತ್ಯಕ್ಕೆ ಕಷ್ಟಗಳು, ನೋವುಗಳು, ದುಃಖಗಳು ಸಾಗರದ ಅಲೆಗಳಂತೆ ಬಂದುಬಂದು ಬಡಿಯುತ್ತವೆ. ಅದೆಲ್ಲವನ್ನು ದಾಟಲು ಶಕ್ಯ ಇರುವವನು ಮಾತ್ರ ಸತ್ಯ ಹೇಳುತ್ತಾನೆ. ಆ ಕಷ್ಟಕಾರ​‍್ಪಣಯಗಳನ್ನು ತಡೆದುಕೊಳ್ಳಲಾಗದವನು ಒಂದು ಸುಳ್ಳಿನಿಂದ, ಅಸತ್ಯದಿಂದ ಸುಖ ಪಡೆಯಬಹುದು ಎಂದುಕೊಂಡರೆ ಆತ ಅದೇ ದಾರಿಯನ್ನು ಹಿಡಿಯುತ್ತಾನೆ. ಸತ್ಯ ಹೇಳಿ ಗೆದ್ದವರಾ​‍್ಯರೋ, ಸುಳ್ಳು ಹೇಳಿ ಸೋತವರಾ​‍್ಯರೋ ಎನ್ನುವಂತೆ ಪ್ರಸ್ತುತ ಕಾಲದ ಜನರ ಜೀವನ ಸರಿ ತಪ್ಪುಗಳ ತಾಕಲಾಟವಾಗಿಬಿಟ್ಟಿದೆ. 

ಸತ್ಯ ಮತ್ತು ಅಸತ್ಯ ಎನ್ನುವವರಿಬ್ಬರು ಅಣ್ಣ ತಮ್ಮಂದಿರು. ಚಿಕ್ಕಂದಿನಿಂದ ಅಸತ್ಯನಿಗೆ ಸತ್ಯನನ್ನು ಸೋಲಿಸುವ ಆಸೆ. ತನಗಿಂತ ಯಾವತ್ತು ಜನರೆದುರು ಮಿಂಚುತ್ತಾನೆ, ಶಬ್ಬಾಷಗಿರಿ ಪಡೆಯುತ್ತಾನೆ ಎನ್ನುವ ಈರ್ಷ್ಯೆ. ಹೇಗಾದರೂ ಮಾಡಿ ಸೋಲಿಸಬೇಕು ಎನ್ನುವ ಬಹುಕಾಲದ ಪ್ರಯತ್ನಕ್ಕೆ ಒಂದು ದಿನ ಕೂಡಿ ಬಂದಿತ್ತು. 

ಇವರಿಬ್ಬರ ಅಪ್ಪ ಹೊಸ ಮನೆಯನ್ನು ಕಟ್ಟಬೇಕು ಎಂದು ಹಣವನ್ನು ಸ್ವಲ್ಪಸ್ವಲ್ಪವೇ ಜೋಡಿಸುತ್ತಿದ್ದ.  ಹಾಗೆ ಕೂಡಿಸುವ ಹಣವನ್ನು ಯಾರಿಗೂ ಕಾಣದಂತೆ ಒಂದು ಪುಟ್ಟ ಪೆಟ್ಟಿಗೆಯಲ್ಲಿ ಹಾಕಿ ದೇವರ ಮಂಟಪದ ಮೇಲೆ ಇರಿಸುತ್ತಿದ್ದ. ಅದು ಹೆಂಡತಿಗೆ ಮಾತ್ರ ತಿಳಿದಿತ್ತು. ಹಾಗಿರುವಾಗ ಒಂದು ದಿನ ರಾತ್ರಿ ಎಲ್ಲರೂ ಮಲಗಿದ ಮೇಲೆ ಹಣ ಎಷ್ಟು ಕೂಡಿತು ಎಂದು ನೋಡಲು ಆ ಪೆಟ್ಟಿಗೆಯನ್ನು ತೆಗೆದ. ತಾನಿಟ್ಟ ಹಣವನ್ನು ಎಣಿಸಿದ. ಇನ್ನು ತಾನು ಮನೆಯನ್ನು ಕಟ್ಟಲು ಆರಂಭಿಸಬೇಕು. ಬರುವ ಮಳೆಗಾಲದಲ್ಲಿ ಈ ಮನೆ ಕುಸಿದು ಬೀಳಬಹುದು. ಅಷ್ಟರಲ್ಲಿ ಮನೆ ಕಟ್ಟಬೇಕು. ಸ್ವಲ್ಪ ಕಡಿಮೆ ಬಿದ್ದರೆ ಸಾಲವನ್ನು ತೆಗೆದುಕೊಳ್ಳಬೇಕು ಎಂದೆಲ್ಲ ಲೆಕ್ಕ ಮಾಡಿ ಆ ಹಣವನ್ನು ಮತ್ತೆ ಪೆಟ್ಟಿಗೆಯಲ್ಲಿ ಹಾಕಿ ಮೊದಲಿನ ಸ್ಥಾನದಲ್ಲಿಯೇ ಇಟ್ಟ. 

ಇದನ್ನು ಅಸತ್ಯ ಎಚ್ಚರವಾಗಿ ನೋಡಿಬಿಟ್ಟಿದ್ದ. ಅಪ್ಪ ಮಲಗಿದ ಮೇಲೆ ಇದೇ ಸರಿಯಾದ ಸಮಯ ಎಂದು ಆ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಹಿತ್ತಲಿನ ಬಾವಿಯಲ್ಲಿ ಎಸೆದುಬಿಟ್ಟ. ಮಾರನೇ ದಿನ ಅಪ್ಪ ಸ್ನಾನ ಮಾಡಿ ದೇವರಿಗೆ ಕೈ ಮುಗಿಯಲು ಹೋದಾಗ ಆ ಪೆಟ್ಟಿಗೆ ಕಾಣಿಸಲಿಲ್ಲ. ಅಪ್ಪನ ಎದೆ ಬಿರಿಯುವುದೊಂದು ಬಾಕಿ. ಹೆಂಡತಿ, ಎರಡು ಮಕ್ಕಳನ್ನು ಕರೆದು ವಿಚಾರಿಸಿದ. ಹೆಂಡತಿ ಮತ್ತು ಸತ್ಯ ಇಬ್ಬರೂ ತಮಗೆ ಗೊತ್ತಿಲ್ಲ ಎಂದರು. ಅಸತ್ಯ ಹೆದರುತ್ತಲೇ ಮಾತಾಡಲು ತಡವರಿಸಿದ. ಅಪ್ಪ ಗದರಿದಾಗ ಆ ಪೆಟ್ಟಿಗೆಯನ್ನು ನಿನ್ನೆ ರಾತ್ರಿ ಸತ್ಯ ಎತ್ತಿಕೊಂಡು ಓಡುತ್ತಿದ್ದ. ಅದನ್ನು ನಮ್ಮಮನೆಯ ಹಿಂದಿನ ಬಾವಿಗೆ ಎಸೆದು ಬಂದು ಮಲಗಿದ. ನನಗೆ ಆ ಪೆಟ್ಟಿಗೆಯಲ್ಲಿ ಏನಿದೆ ಅಂತ ಗೊತ್ತಿರಲಿಲ್ಲ. ತುಂಬಾ ನಿದ್ರೆ ಬಂದಿತ್ತು. ಹಾಗೆ ಮಲಗಿಬಿಟ್ಟೆ. ಈಗ ನೀವು ವಿಚಾರಿಸಿದಾಗಲೇ ಮತ್ತೆ ನೆನಪಿಗೆ ಬಂತು. ಈ ಸತ್ಯನೇ ತೆಗೆದುಕೊಂಡು ಹೋಗಿದ್ದು ಎಂದು ಸುಳ್ಳು ಹೇಳಿದ. ಅಸತ್ಯನ ಮಾತು ಕೇಳಿದ ಅಪ್ಪ ಬಾವಿಯತ್ತ ಓಡಿದ. ಬಾವಿಯ ನೆಲದಲ್ಲಿ ಪೆಟ್ಟಿಗೆ ಇರುವುದು ಖಾತ್ರಿಯಾಗಿ ಅಪ್ಪನೇ ಬಾವಿಗೆ ಇಳಿದು ನೀರಿನಿಂದ ಪೆಟ್ಟಿಗೆ ಹುಡುಕಿ ತಂದ. ಪೆಟ್ಟಿಗೆ ಬಾಯಿ ತೆರೆದಾಗ ಅದರಲ್ಲಿದ್ದ ಹಣವೆಲ್ಲ ನೀರಿನಿಂದ ಒದ್ದೆಯಾಗಿ ಹಾಳಾಗಿಬಿಟ್ಟಿತ್ತು. ಅಪ್ಪನಿಗೆ ಕೋಪ ಬಂದು ಸತ್ಯನನ್ನು ಮನೆಯಿಂದ ಹೊರಗೆ ಕಳಿಸಿಬಿಟ್ಟನು. 

ಸತ್ಯ ಊರೂರು ಅಲೆಯುತ್ತ ಕೂಲಿ ಕೆಲಸವನ್ನು ಮಾಡುತ್ತ ಜೀವನ ಸಾಗಿಸಿದ. ಸತ್ಯವಂತನ ಕೆಲಸ ನೋಡಿದ ಒಬ್ಬ ಶ್ರೀಮಂತ ತನ್ನ ಮನೆಯ ಕೆಲಸಕ್ಕೆ ಇಟ್ಟುಕೊಂಡ. ದಿನದಿಂದದಿನಕ್ಕೆ ಅವನ ನಡೆನುಡಿ ಕಂಡು ಮೇಲ್ದರ್ಜೆಯ ಕೆಲಸಕ್ಕೆ ನೇಮಿಸಿದ.. ಹಾಗೆ ತನ್ನ ಮಗಳನ್ನು ಕೊಟ್ಟು ಮದುವೆಯನ್ನು ಮಾಡಿದ. ದೊಡ್ಡ ಶ್ರೀಮಂತನೂ ಆದ. ಅವನಿಗೊಬ್ಬ ಮಗನು ಹುಟ್ಟಿ ದೊಡ್ಡವನಾದ ನಂತರ ತಾಯಿಯಿಂದ ಸತ್ಯನ ಎಲ್ಲ ಕಥೆ ಕೇಳಿ ತಿಳಿದುಕೊಂಡ. ಅಪ್ಪನಿಗೆ ಹೇಳದೆ ಒಂದು ದಿನ  ತನ್ನ ಮೂಲ ಮನೆಗೆ ಬಂದ. ಅಜ್ಜನಿಗೆ ವಯಸ್ಸಾಗಿತ್ತು. ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲ. ಬಂದಿದ್ದು ಯಾರೆಂದು ತಿಳಿಯಲಿಲ್ಲ. ಆತೀಯವಾಗಿ ಮಾತನಾಡಿ ಅಜ್ಜನ ಕೈಗೆ ನಾಲ್ಕು ಬಂಗಾರದ ನಾಣ್ಯಗಳಿರುವ ಪುಟ್ಟ ಚೀಲವನ್ನು ನೀಡಿ, ತಾನು ಸ್ವಲ್ಪ ಹೊರಗೆ ಹೋಗಿ ಬರುತ್ತೇನೆ. ಇದನ್ನು ಬಿಚ್ಚಿ ನೋಡಬೇಡಿ ಎಂದು ಹೇಳಿದ. ಚಿಕ್ಕ ಹುಡುಗನ ಮಾತಿಗೆ ಅಜ್ಜ ಒಪ್ಪಿದ. ಹಾಗೆ ಅದನ್ನು ತೆಗೆದುಕೊಂಡು ಹೋಗಿ ತನ್ನ ಪೆಟ್ಟಿಗೆಯಲ್ಲಿ ಇಟ್ಟ.  ಯಾವುದೋ ಕಾರಣಕ್ಕೆ ಅಸತ್ಯ ಅಪ್ಪನ ಪೆಟ್ಟಿಗೆ ತೆಗೆದಾಗ ಆ ನಾಣ್ಯಗಳು ಕಂಡವು. ಅಪ್ಪ ಇಷ್ಟು ಬಂಗಾರದ ನಾಣ್ಯ ಇಟ್ಟುಕೊಂಡಿದ್ದಾನೆ. ಅವನಿಗೆ ಕಣ್ಣು ಕಾಣದು ಎಂದು ಯೋಚಿಸಿ ಆ ಚೀಲದಲ್ಲಿ ಗೀಲೀಟಿನ ನಾಣ್ಯದಂತಹ ವಸ್ತುವನ್ನು ಹಾಕಿಟ್ಟು ಬಂಗಾರದ ನಾಣ್ಯವನ್ನು ತೆಗೆದುಕೊಂಡು ಬಿಟ್ಟ. ಹುಡುಗ ತಿರುಗಿ ಬಂದು ಅಜ್ಜನ ಬಳಿಯಿಂದ ಆ ನಾಣ್ಯವನ್ನು ತೆಗೆದುಕೊಂಡು ಪರೀಕ್ಷಿಸಿದ. ಅಜ್ಜನ ಬಳಿ ಹುಡುಗ ಸತ್ಯವಾದ ವಿಚಾರ ಹೇಳಿದ. ಅಜ್ಜನಿಗೆ ಇದು ಅಸತ್ಯನ ಕೆಲಸ ಎಂದು ತಿಳಿಯಿತು. ಅಸತ್ಯನನ್ನು ಕೇಳಿದ. ಈ ಮನೆಯಲ್ಲಿ ನಾನು ನೀನು ಮಾತ್ರ ಇರುವುದು. ನನ್ನ ಕೋಣೆಗೆ ನೀನು ಮಾತ್ರ ಹೋಗಿದ್ದು ನನಗೆ ಗೊತ್ತಿದೆ. ನಿಜ ಹೇಳು ಎಂದ. ಆಗ ತಪ್ಪು ಒಪ್ಪಿಕೊಳ್ಳಲೇ ಬೇಕಾಯ್ತು. ಅಪ್ಪನ ಎದುರು ಅಸತ್ಯ ತಲೆ ತಗ್ಗಿಸಿದ. ಅಸತ್ಯನನ್ನು ಮನೆಯಿಂದ ಹೊರಗೆ ಹಾಕಿ ಸತ್ಯ ಮತ್ತು ಅವನ ಕುಟುಂಬವನ್ನು ತನ್ನ ಮನೆಗೆ ಕರೆಸಿಕೊಂಡ. 

ಅಸತ್ಯ ಎಂದು ಏಕಾಂಗಿ. ಮೊದಲು ಗೆದ್ದಂತೆ ಕಂಡರೂ ಕೊನೆಯಲ್ಲಿ ಎದ್ದು ನಿಲ್ಲಲಾಗದ ಸೋಲು ಅಸತ್ಯಕ್ಕೆ ಬಂದು ಬಿಡುತ್ತದೆ. ಸತ್ಯ ಎಂದಿಗೂ ಶುದ್ಧ ಬಂಗಾರ. ಬಂಗಾರವನ್ನು ಬೆಂಕಿಯಲ್ಲಿ ಹಾಕಿದರೂ ಕಪ್ಪಾಗದು. ತನ್ನ ಗುಣವನ್ನು ಕಳೆದುಕೊಳ್ಳದು. ಮತ್ತಷ್ಟು ಹೊಳಪು ತಂದುಕೊಳ್ಳುತ್ತದೆಯೇ ಹೊರತು ಮಾಸಿ ಹೋಗದು. ಮನುಷ್ಯನ ಬದುಕು ಏರಿಳಿತದಿಂದ ಕೂಡಿದ್ದು. ಕೆಲವು ಸಮಯಕ್ಕೆ ಒಳಿತಾಗುವುದು ಎಂದರೆ ಅಸತ್ಯ ನುಡಿಯಬೇಕಾಗುವುದು. ಅಪ್ರಿಯ ಸತ್ಯ ಒಳ್ಳೆಯದಲ್ಲ ಎನ್ನುವ ಮಾತಿದೆ. ಅದನ್ನು ಹೊರತು ಪಡಿಸಿದರೆ ನಮ್ಮ ನಡೆ ನುಡಿ ವಿನಯತೆಯ ಜೊತೆ ಸತ್ಯವಂತರಾಗಿದ್ದರೆ ಮಾತ್ರ ಸಮಾಜದಲ್ಲಿ ನಾವು ಮುಂದಕ್ಕೆ ಸಾಗಬಹುದು. 

- * * * -