ಬೆಂಗಳೂರು, ಜ 6 ಪ್ರತಿನಿತ್ಯ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ರಾಜಸ್ತಾನದ ಜೋಧಪುರ್ ಅಡುಗೆ ಕೇಂದ್ರಗಳಿಂದ 1.50 ಲಕ್ಷ ಮಕ್ಕಳಿಗೆ ರುಚಿ, ಶುಚಿ, ಸ್ವಾದಿಷ್ಟಯುಕ್ತ ಮಧ್ಯಾಹ್ನದ ಬಿಸಿಯೂಟ ಸರಬರಾಜು ಮಾಡುತ್ತಿರುವ ಅದಮ್ಯ ಚೇತನ ಸಂಸ್ಥೆಯ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಮಂಗಳವಾರ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಭೇಟಿ ನೀಡಲಿದ್ದಾರೆ.
ಅದಮ್ಯ ಚೇತನ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅನ್ನ-ಅಕ್ಷರ-ಆರೋಗ್ಯ ಎಂಬ ಮೂರು ಪ್ರಮುಖ ಪ್ರಕಲ್ಪಗಳಡಿಯಲ್ಲಿ ಸೇವಾನಿರತವಾಗಿದೆ. ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ತಮ್ಮ ತಾಯಿ ಗಿರಿಜಾ ಶಾಸ್ತ್ರಿ ಸ್ಮರಣಾರ್ಥ ನಿ್ಕ್ಲ್ಖು ಚೇತನ? ಸಂಸ್ಥೆಯನ್ನು 1997ರಲ್ಲಿ ಸ್ಥಾಪಿಸಿದರು. ತಮ್ಮ ಸಾರ್ವಜನಿಕ ಜೀವನ ಮತ್ತು ಅದಮ್ಯ ಚೇತನದ ಮುಖಾಂತರ ಉತ್ತಮ ಸಮಾಜ ಮತ್ತು ದೇಶ ನಿರ್ಮಿಸುವತ್ತ ಭದ್ರ ಬುನಾದಿಯನ್ನು ಹಾಕಿದರು.
ಕಳೆದ 2003ರಲ್ಲಿ ಆರಂಭವಾದ ಅನ್ನಪೂರ್ಣ ಬಿಸಿಯೂಟ ಯೋಜನೆಯಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರತಿನಿತ್ಯ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ರಾಜಸ್ಥಾನದ ಜೋಧಪುರ್ ಅಡುಗೆ ಕೇಂದ್ರಗಳಿಂದ ಇದುವರೆಗೂ ಸುಮಾರು 47 ಕೋಟಿ ಊಟ ಸರಬರಾಜು ಮಾಡಿದ ಹೆಗ್ಗಳಿಕೆ ಹೊಂದಿದೆ.
ಅನ್ನಪೂರ್ಣ ಅಡುಗೆ ಮನೆಯನ್ನು ಶೂನ್ಯ ತ್ಯಾಜ್ಯ ಅಡುಗೆ ಮನೆ ಎಂದು ಸಿದ್ಧಪಡಿಸಲಾಗಿದೆ. ಪರ್ಯಾಯ ಇಂಧನಗಳ ಕುರಿತು ಮಾಡಿದ ಸಂಶೋಧನೆಗಳಿಂದ ಜೈವಿಕ ತ್ಯಾಜ್ಯವನ್ನು ಅದಮ್ಯ ಚೇತನ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಫಾಸಿಲ್ ಇಂಧನವನ್ನು ಉಳಿತಾಯ ಮಾಡುತ್ತಿದ್ದು ಪ್ರತಿದಿನವೂ 75 ಎಲ್ಪಿಜಿ ಸಿಲಿಂಡರ್ಗಳಷ್ಟು ಮತ್ತು 750 ಲೀಟರ್ ಡೀಸೆಲ್ನಷ್ಟು ಉಳಿತಾಯವಾಗುತ್ತಿದೆ.
ಈ ಶೂನ್ಯ ತ್ಯಾಜ್ಯ ಅಡುಗೆ ಮನೆಯ ನಿರ್ವಹಣೆಯ ಬಗ್ಗೆ ಸನ್ಮಾನ್ಯ ಉಪರಾಷ್ಟ್ರಪತಿಗಳಿಗೆ ಅದಮ್ಯ ಚೇತನದ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ತಿಳಿಸಿಕೊಡಲಿದ್ದಾರೆ.