ನವದೆಹಲಿ, ಡಿ 8 : ಭಾರತ ಅತ್ಯಾಚಾರಗಳ ರಾಜಧಾನಿಯಾಗಿ ಮಾರ್ಪಟ್ಟಿದೆ, ಹೆಣ್ಣು ಮಕ್ಕಳನ್ನು ದೇಶದಲ್ಲಿ ಏಕೆ ರಕ್ಷಿಸಲು ಸಾಧ್ಯವಾಗುತ್ತಿಲ್ಲ? ಎಂದು ಇತರ ದೇಶಗಳು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಭಾನುವಾರ ಆಕ್ಷೇಪ ವ್ಯಕ್ತಪಡಿಸಿ, ಪರೋಕ್ಷವಾಗಿ ಟೀಕಿಸಿದ್ದಾರೆ. ಪುಣೆಯಲ್ಲಿ ಡೀಮ್ಡ್ ವಿಶ್ವವಿದ್ಯಾಲಯ ಘಟಿಕೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಭಾರತಕ್ಕೆ ಯಾರೂ ಕೆಟ್ಟ ಹೆಸರು ತರುವ ಕೆಲಸ ಮಾಡಬಾರದು ಎಂದು ಈ ಸಂದರ್ಭದಲ್ಲಿ ಅವರು ಮನವಿಮಾಡಿದರು. ಭಾರತ ಅತ್ಯಾಚಾರಗಳ ರಾಜಧಾನಿಯಾಗಿ ಮಾರ್ಪಟ್ಟಿದೆಯೆಂದೂ , ಯಾರ್ಯಾರೋ ಏನೇನೋ ಮಾತನಾಡುತ್ತಿದ್ದಾರೆ. ನಿರ್ದಿಷ್ಟವಾಗಿ ಅ ವಿಷಯಕ್ಕೆ ತಾವು ಹೋಗುವುದಿಲ್ಲ. ಆದರೆ, ನಾವು ಎಂದಿಗೂ ನಮ್ಮ ತಾಯ್ನಾಡನ್ನು ಕೆಳಮಟ್ಟಕ್ಕಿಳಿಸಬಾರದು ಮತ್ತು ಇಂತಹ ಘಟನೆಗಳ ಸಂದರ್ಭದಲ್ಲಿ ರಾಜಕೀಯ ಬೆರಸ ಬಾರದು ಎಂದು ಕಿವಿ ಮಾತು ಹೇಳಿದರು. ಭಾರತೀಯ ಸಂಪ್ರದಾಯದಲ್ಲಿ, ಮಹಿಳೆಯರನ್ನು ತಾಯಂದಿರು, ಸಹೋದರಿಯರೆಂದು ಪರಿಗಣಿಸಲಾಗುತ್ತದೆ, ಆದರೆ ಇತ್ತೀಚಿನ ಘಟನೆಗಳು ದೇಶವನ್ನು ನಾಚಿಕೆಪಡುವಂತೆ ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ನಮಗೆ ಇಂತಹ ಘಟನೆಗಳು ಹೊಸ ಸವಾಲುಗಳಾಗಿವೆ ಎಂದು ರಾಷ್ಟ್ರಪತಿ ಹೇಳಿದರು. ಹೊಸ ಕಾನೂನುಗಳು ಸಮಸ್ಯೆಗಳನ್ನು ಬಗೆಹರಿಯುವುದಿಲ್ಲ. ಆದೇ ರೀತಿ ಹೊಸ ಕಾನೂನು ಮತ್ತು ಮಸೂದೆಗಳನ್ನು ಪರಿಚಯಿಸಲು, ಜಾರಿಗೊಳಿಸಲು ತಾವು ವಿರೋಧಿಸುವುದಿಲ್ಲ ಎಂದು ಹೇಳಿದರು. ನಿರ್ಭಯಾ ವಿಧೇಯಕ ಮೇಲೆ ನಾವು ಹೊಸ ಕಾನೂನು ರೂಪಿಸಿದ್ದೇವೆ. ಆದರೆ ಏನಾಗಿದೆ? ಸಮಸ್ಯೆ ಬಗೆಹರಿದಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.