ಹಿರಿಯ ನಟ ರಿಷಿ ಕಪೂರ್ ನಿಧನ

ಮುಂಬೈ, ಏ.30, ಬಾಲಿವುಡ್ ನ ಹಿರಿಯ ನಟ, ನಿರ್ದೇಶಕ, ಚಿತ್ರ ನಿರ್ಮಾಪಕ ರಿಷಿ ಕಪೂರ್ ಮುಂಬೈ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಖ್ಯಾತ ನಟ ಇರ್ಫಾನ್ ಖಾನ್ ಅವರ ಸಾವಿನ ಸುದ್ದಿ ಅಭಿಮಾನಿಗಳ ಮನದಿಂದ ಮಾಸುವ ಮುನ್ನವೇ ಸ್ಟಾರ್ ನಟ ರಿಷಿ ಕಪೂರ್ (67) ಸಾವು ಸಂಭವಿಸಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಷಿ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ರಿಷಿ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್ ರೋಗ ಕಾಣಿಸಿಕೊಂಡ ಬಳಿಕ ರಿಷಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು, ಹೋದ ವರ್ಷ ಸೆಪ್ಟಂನರ್ ನಲ್ಲಿ ಸ್ವದೇಶಕ್ಕೆ ಆಗಮಿಸಿದ್ದರು. ರಿಷಿ ಅವರು ಸಾಮಾಜಿಕ ತಾಣದಲ್ಲಿ ಬಹು ಸಕ್ರಿಯವಾಗಿದ್ದರು. ಇವರು ಪತ್ನಿ, ಒಬ್ಬ ಪುತ್ರಿ, ಒಬ್ಬ ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. “ಮೇರಾ ನಾಮ್ ಜೋಕರ್” ಚಿತ್ರದ ಅಭಿನಯಕ್ಕಾಗಿ ಫಿಲ್ಮ್ ಅವಾರ್ಡ್ ಪಡೆದು ಕೊಂಡಿದ್ದರು. ಇವರ ನೈಜ ಅಭಿನಯಕ್ಕಾಗಿ ಹಲವು ಪ್ರಶಸ್ತಿಗಳು ಸಂದಿದವು. ‘ ಶ್ರೀ 420, ಬಾಬಿ, ಜಹರೀಲಾ ಇನ್ ಸಾನ್, ಜಿಂದಾ ದಿಲ್, ರಾಜ, ದೋ ಪ್ರೇಮಿ, ಸಲಾಂ ಮೇಮ್ ಸಾಬ್, ಕರ್ಜ್, ನಸೀಬ್’ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.