ಶಶಿಧರ ಶಿರಸಂಗಿ
ಶಿರಹಟ್ಟಿ 13: ತಾಲೂಕಿನಾದ್ಯಾಂತ ಮುಂದುವರೆದ ಬರಗಾಲದಿಂದ ಮತ್ತು ಬೆಂಕಿಯಂತೆ ಸುಡುತ್ತಿರುವ ಬೇಸಿಗೆಯಿಂದ ಹೆಚ್ಚುತ್ತಿರುವ ತಾಪಮಾನದಿಂದ ಅಂತರ್ಜಲ ಕುಸಿತದಿಂದ ಹಾಗೂ ಬರಗಾಲದ ಬೇಗೆಯಿಂದ ಸಾಕಷ್ಟು ಮಳೆಯಾಗದೇ ದಿನದಿಂದ ದಿನಕ್ಕೆ ತರಕಾರಿ ಬೆಲೆಗಳು ಏರಿಕೆ ಕಾಣುತ್ತಿವೆ. ಇದು ಬಿಸಿಲಿನ ಬೆಗೆಯಿಂದ ಬಳಲುತ್ತಿರುವ ಗ್ರಾಹಕರಿಗೆ ಇದೀಗ ಬೆಲೆ ಏರಿಕೆಯ ಚುರುಕು ತಟ್ಟುತ್ತಿದೆ.
ತಾಲೂಕು ಬಹುತೇಕ ಕೃಷಿ ಚಟುವಟಿಕೆಯಿಂದ ಅದರಲ್ಲೂ ಹೆಚ್ಚು ಮಳೆಯಾಶ್ರಿತವಾಗಿದೆ. ಆದರೆ ಸರಕಾರದ ಯೋಜನೆಗಳಾದ ಕೆರೆಗಳಿಗೆ ನದಿ ನೀರು ತುಂಬಿಸುವದು ಹಾಗೂ ಏತ ನೀರಾವರಿ ಯೋಜನೆ ಅಲ್ಲದೆ ಅನೇಕ ರೈತರು ಕೊಳವೆ ಬಾವಿಗಳ ಮೂಲಕ ತೊಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ತಾಲೂಕು ಎಂಬ ಹೆಸರು ಪಡೆದಿರುವ ಹಳೆಯ ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 6850 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇನ್ನೂ ಇದರಲ್ಲಿ ಕೇವಲ 78 ಹೆಕ್ಟರ್ ಪ್ರದೇಶದಲ್ಲಿ ಹೆಚ್ಚಾಗಿ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಟೊಮೇಟೊ, ಬದನೆಕಾಯಿ, ಹಸಿ ಮೆಣಸಿನಕಾಯಿ, ಈರುಳ್ಳಿ ಮುಂತಾದವುಗಳು ಪ್ರಮುಖ ಬೆಳೆಗಳಾಗಿವೆ.
ಬೆಳೆಗೆ ನೀರಿನ ಸಮಸ್ಯೆ. ಸತತ ಬರಗಾಲ ಹಾಗೂ ವರುಣನ ಅವಕೃಪೆಯಿಂದ ಕೆರೆಗೆ ನೀರು ತುಂಬಿಸ ಬೇಕಾದ ನದಿಗಳಲ್ಲಿಯೇ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಬಾರಿ ಬೇಸೆಗೆಯಲ್ಲಿ ಜನರು ಗರಿಷ್ಠ 41 ಡಿಗ್ರೀಯಷ್ಠು ಉಷ್ಣಾಂಶ ಕಂಡಿದ್ದಾರೆ. ಈ ಹೆಚ್ಚಿದ ಉಷ್ಣಾಂಶ ರೈತರಿಗೆ ಆಸರೆಯಾಗಿದ್ದ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿಯಲು ಕಾರಣವಾಗಿದೆ. ನಿತ್ಯ ನೀರು ಹಾಯಿಸ ಬೇಕಾದ ತರಕಾರಿ ಬೆಳೆಗಳಿಗೆ ನೀರಿನ ಸಮಸ್ಯ ಎದುರಾಗಿರುವದರಿಂದ ಬೆಳೆಗಳು ಬಾಡುತ್ತಿವೆ.
ಇದರ ಪರಿಣಾಮ ಸ್ಥಳೀಯವಾಗಿ ಲಭಿಸುವ ತರಕಾರಿಗಳ ಅವಕ ಕಡಿಮೆಯಾಗುತ್ತಿದೆ ಎನ್ನುತ್ತಾರೆ ವರ್ತಕರು. ಇದರಿಂದ ಸಹಜವಾಗಿ ಬೇರೆಡೆಯಿಂದ ಆಮುದು ಮಾಡಿಕೊಳ್ಳಲಾಗುತ್ತಿದೆ. ಸಾರಿಗೆ ವೆಚ್ಚ, ಹಮಾಲಿ ವೆಚ್ಚಗಳಿಂದಾಗಿ ಕೆಲವಾರು ತರಕಾರಿಗಳ ಬೆಲೆಗಳು ಹೆಚ್ಚಾಗಿವೆ ಎಂಬುವದು ವರ್ತಕರ ಮಾತು. ಗ್ರಾಹಕರ ಜೇಬಿಗೆ ಹೊರೆ: ಸ್ಥಳಿಯವಾಗಿ ತರಕಾರಿ ಬೆಳೆಗಳು ಕಡಿಮೆಯಾದದ್ದರಿಂದ ಹೊರ ಜಿಲ್ಲೆಗಳಿಂದ ಆಮದು ಮಾಡಿಕೊಳ್ಳಲಾಗುವ ಸೌತೆಕಾಯಿ, ಮೆಣಸಿನಕಾಯಿ, ಬೀನ್ಸ, ಗಜ್ಜರಿ, ಬೀಟ್-ರೂಟ್ ಹಾಗೂ ಹಗಲಕಾಯಿ ಬೆಲೆಗಳು 50 ರಿಂದ 70 ರೂ. ವರೆಗೆ ಏರಿಕೆಯಾಗಿದ್ದು ಗ್ರಾಹಕರ ಜೇಬಿಗೆ ಹೋರೆಯಾಗುತ್ತಿವೆ.