ಶೇ.16 ಮೀಸಲಾತಿಗೆ ಸರ್ಕಾರಕ್ಕೆ ಮನವಿ ಮಾಡಲು ವೀರಶೈವ-ಲಿಂಗಾಯತ ಮೀಸಲಾತಿ ಹೋರಾಟ ಸಮಿತಿ ನಿರ್ಧಾರ

ಬೆಂಗಳೂರು, ಜ. 7, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಬೇಡಿಕೆ ಇಟ್ಟಿದ್ದ ವೀರಶೈವ ಲಿಂಗಾಯತ ಸಮುದಾಯ ಈಗ ಸಮಸ್ತ ವೀರಶೈವರು ಸೇರಿದಂತೆ ಲಿಂಗಾಯತ ಸಮುದಾಯಕ್ಕೆ ಮಹಾರಾಷ್ಟ್ರ `ಮರಾಠ ಮೀಸಲಾತಿ' ಮಾದರಿಯಲ್ಲಿ ಶೇ.16 ರಷ್ಟು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಮುಂದಾಗಿದೆ.ಮೀಸಲಾತಿ ಪ್ರಮಾಣ ಶೇ.50 ಮೀರಬಾರದು ಎಂದು ಸುಪ್ರೀಂ ಕೋರ್ಟ್ 1992 ರಲ್ಲಿಯೇ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರಗಳಿಗೆ ಯಾವುದೇ ಸಮುದಾಯ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಮನವರಿಕೆಯಾದರೆ, ಅಂತಹ ಸಮುದಾಯಕ್ಕೆ ವಿಶೇಷ ಮೀಸಲಾತಿ ನೀಡಲು ಅವಕಾಶವಿದೆ. ಅದೇ ಹಿನ್ನೆಲೆಯಲ್ಲಿ ತಮಿಳುನಾಡು, ಹರ್ಯಾಣ, ಜಾರ್ಖಂಡ್ ಹಾಗೂ ಮಹಾರಾಷ್ಟ್ರ ರಾಜ್ಯಗಳು ಸ್ಥಳೀಯವಾಗಿ ಹಿಂದುಳಿದ ಸಮುದಾಯಗಳಿಗೆ ಶೇ.10 ರಿಂದ 16 ವರೆಗೂ ಮೀಸಲಾತಿ ನೀಡಿವೆ. ಈಗ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಪರಿಗಣಿಸಿ ಶೇ.16 ರಷ್ಟು ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ಸಮಸ್ತ ಲಿಂಗಾಯತ ಮೀಸಲಾತಿ ಹೋರಾಟ ಸಮಿತಿ ನಿರ್ಧರಿಸಿದೆ. ಈ ಕುರಿತಂತೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ 2019ರ ಜೂನ್ 3 ರಂದು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ನಂತರ ಸರ್ಕಾರ ಬದಲಾಗಿದ್ದರಿಂದ ಲಿಂಗಾಯತ ಮುಖಂಡರು ಈಗ ಯಡಿಯೂರಪ್ಪ ಅವರ ಮೇಲೆ ಒತ್ತಡ ತಂದು ಸಮುದಾಯಕ್ಕೆ ಮಹಾರಾಷ್ಟ್ರ ಮಾದರಿಯಲ್ಲಿ ಶೇ.16 ರಷ್ಟು ಮೀಸಲಾತಿ ನೀಡಲು ಕುಲಶಾಸ್ತ್ರೀಯ ಅಧ್ಯಯಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿ ಶೇ.15, ಪರಿಶಿಷ್ಟ ಪಂಗಡ ಶೇ. 3, ಇತರೆ ಹಿಂದುಳಿದ ವರ್ಗ ಗಳಿಗೆ ಶೇ. 32 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಸುಪ್ರೀಂ ಕೋರ್ಟ್ ಆದೇಶದಂತೆ ಶೇ.50 ಮೀರದಂತಿದೆ. ಆದರೆ, ಈಗ ಪರಿಶಿಷ್ಟ ಪಂಗಡ (ವಾಲ್ಮೀಕಿ ಸಮುದಾಯ) ಜನಾಂಗದವರು ತಮಗೆ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆ ಆಧಾರದಲ್ಲಿ ಶೇ.3 ರಿಂದ 7.5 ಕ್ಕೆ ಹೆಚ್ಚಿಸುವಂತೆ ಈಗಾಗಲೇ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ರಾಜ್ಯ ಸರ್ಕಾರ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಸಲ್ಲಿಸಲು ಸೂಚಿಸಿದೆ. ಇದಲ್ಲದೇ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದ ಬಡವರಿಗೆ ಶೇ.10 ಮೀಸಲು ನೀಡಲು ಈಗಾಗಲೇ ಕಾನೂನು ಜಾರಿಗೊಳಿಸಿದ್ದು, ರಾಜ್ಯ ಸರ್ಕಾರವೂ ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ನೀಡಲು ತೀರ್ಮಾನಿಸಿದರೆ ರಾಜ್ಯದ ಮೀಸಲಾತಿ ಪ್ರಮಾಣ ಶೇ. 60 ರಷ್ಟಾಗುತ್ತದೆ. ವಾಲ್ಮೀಕಿ ಸಮುದಾಯದ ಮೀಸಲಾತಿ ಶೇ.4.5 ರಷ್ಟು ಹೆಚ್ಚಳ ಮಾಡಿದರೆ ಶೇ.64.5 ರಷ್ಟಾಗುತ್ತದೆ. ಇದರೊಂದಿಗೆ ಸಮಸ್ತ ಲಿಂಗಾಯತ ಸಮುದಾಯಕ್ಕೆ ಮಹಾರಾಷ್ಟ್ರ ಮಾದರಿಯಲ್ಲಿ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಶೇ.16 ಮೀಸಲಾತಿ ನೀಡಲು ಮುಂದಾದರೆ ರಾಜ್ಯದಲ್ಲಿ ಮೀಸಲು ಪ್ರಮಾಣ ಶೇ.80.5 ರಷ್ಟಾಗುತ್ತದೆ. ಲಿಂಗಾಯತರ ವಾದ ಏನು ?: ರಾಜ್ಯದಲ್ಲಿ 102 ಒಳ ಪಂಗಡಗಳನ್ನು ಒಳಗೊಂಡಿರುವ ಸಮಸ್ತ (ವೀರಶೈವರು ಸೇರಿ) ಲಿಂಗಾಯತ ಸಮುದಾಯ ಸುಮಾರು 2 ಕೋಟಿ ಜನಸಂಖ್ಯೆಗೂ ಹೆಚ್ಚಿದ್ದು, ಸಮುದಾಯದ ಬಹುತೇಕ ಒಳ ಪಂಗಡಗಳು ಕುಲ ಕಸುಬುಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಶಿಕ್ಷಣ, ಉದ್ಯೋಗದಲ್ಲಿ ಸಮುದಾಯ ಸಾಕಷ್ಟು ಹಿಂದುಳಿದಿದ್ದು, ತುಳಿತಕ್ಕೊಳಗಾದ ಈ ಸಮುದಾಯವನ್ನು ಮೇಲೆ ತರಲು ವಿಶೇಷ ಮೀಸಲಾತಿ ಅಗತ್ಯವಿದ್ದು, ಮಹಾರಾಷ್ಟ್ರ ಮಾದರಿ ಶೇ.16 ರಷ್ಟು ಮೀಸಲಾತಿ ಕಲ್ಪಿಸಲು ಕಾನೂನಿಯ ಅಡಿಯಲ್ಲಿಯೇ ರಾಜ್ಯ ಸರ್ಕಾರಕ್ಕೆ ಅವಕಾಶವಿದೆ ಎನ್ನುವುದು ಅವರ ಬೇಡಿಕೆ. ಈಗಾಗಲೇ ಪ್ರತ್ಯೇಕ ಧರ್ಮವಾಗಿರುವ ಜೈನರು, ಕ್ರಿಶ್ಚಿಯನ್ನರು, ಬೌದ್ಧರು, ಸಿಖ್ಖರು, ಪಾರ್ಸಿಗಳು 3ಬಿ ವರ್ಗದಡಿ ಬರುತ್ತಾರೆ. ರಾಜ್ಯದಲ್ಲಿ 3 ಬಿ ಪ್ರವರ್ಗದಲ್ಲಿ 5 ಮೀಸಲಾತಿ ನೀಡಲಾಗುತ್ತಿದೆ. ಅದರಲ್ಲಿ ಲಿಂಗಾಯತರು, ಮರಾಠರು, ಜೈನರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಪಾರ್ಸಿಗಳಿಗೆ ನೀಡಲಾಗುತ್ತಿದೆ. ಈಗ ಲಿಂಗಾಯತರಿಗೆ ಶೇ.16 ರಷ್ಟು 3ಬಿ ವರ್ಗದಲ್ಲಿರುವ ಉಳಿದ ಸಮುದಾಯಗಳಿಗೆ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಿನ ಅವಕಾಶ ದೊರೆಯುತ್ತದೆ. ಈಗಾಗಲೇ ಶೈಕ್ಷಣಿಕ ಉದ್ದೇಶದಿಂದ ಲಿಂಗಾಯತ ಸಮುದಾಯದ ಕೆಲವು ಉಪ ಪಂಗಡಗಳು 2ಎ ಅಡಿಯಲ್ಲಿ ಮೀಸಲಾತಿ ಪಡೆಯುತ್ತಿವೆ. ಇದರಿಂದ 2ಎ ವ್ಯಾಪ್ತಿಯಲ್ಲಿರುವ 264 ಜಾತಿಗಳಿಗೂ ಅನಾನುಕೂಲವಾಗುತ್ತಿದೆ ಎಂಬ ಆರೋಪವಿದೆ. ಸಮಸ್ತ ಲಿಂಗಾಯತ ಸಮುದಾಯಕ್ಕೆ ಶೇ.16 ರಷ್ಟು ಮೀಸಲಾತಿ ನೀಡಿದರೆ 2ಎ ಪ್ರವರ್ಗದಡಿ ಮೀಸಲಾತಿ ಪಡೆಯುವ ಲಿಂಗಾಯತ ಸಮುದಾಯಗಳು ಆ ವ್ಯಾಪ್ತಿಯಿಂದ ಹೊರ ಬರುವುದರಿಂದ 2ಎ ಪ್ರವರ್ಗದಡಿಯಲ್ಲಿ ಮೀಸಲಾತಿ ಪಡೆಯುವ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆತಂತಾಗುತ್ತದೆ ಎನ್ನುವುದು ಲಿಂಗಾಯತ ಮೀಸಲಾತಿ ಹೋರಾಟಗಾರರ ವಾದ. ಪ್ರತ್ಯೇಕ ಧರ್ಮದ ಬದಲು ಮೀಸಲಾತಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿರುವುದರಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ನಿರಾಸೆಯುಂಟಾಗಿದೆ. ಹೀಗಾಗಿ ಪ್ರತ್ಯೇಕ ಧರ್ಮಕ್ಕಾಗಿ ಕಾನೂನು ಹೋರಾಟ ಸುದೀರ್ಘ ಸಮಯ ತೆಗೆದುಕೊಳ್ಳುವುದರಿಂದ ಅದರಿಂದ ತಕ್ಷಣಕ್ಕೆ ಸಮುದಾಯಕ್ಕೆ ಯಾವುದೇ ರೀತಿಯ ಪ್ರಯೋಜನ ದೊರೆಯುವುದಿಲ್ಲ ಎನ್ನುವ ಕಾರಣಕ್ಕೆ ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಯಲ್ಲಿದ್ದ ಬಸವರಾಜ ಹೊರಟ್ಟಿ ಹಾಗೂ ಕೆಲವು ಮಠಾಧೀಶರೂ ಜಾತಿ ಆಧಾರದಲ್ಲಿಯೇ ಶೇ.16 ರಷ್ಟು ಮೀಸಲಾತಿ ಪಡೆಯುವ ಪ್ರಯತ್ನಕ್ಕೆ ಕೈಜೋಡಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.