ಮಹಾಲಿಂಗಪುರ 17: ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ಕೆಂಗೇರಿಮಡ್ಡಿಯ ಸರಕಾರಿ ಜಾಗೆಯಲ್ಲಿ ವಾಸವಾಗಿದ್ದ ಸುಮಾರು 30 ಕುಟುಂಬಗಳನ್ನು ಇತ್ತಿಚೆಗೆ ಕಂದಾಯ ಇಲಾಖೆ ತೆರವುಗೊಳಿಸಿರುವ ಸ್ಥಳಕ್ಕೆ ಬುಧವಾರ ಎರಡನೇ ಬಾರಿಗೆ ಭೇಟಿ ನೀಡಿ ಅಧಿಕೃತ ಸೂರು ಒದಗಿಸಲು ಸ್ಥಳೀಯ ಮುಖ್ಯಾಧಿಕಾರಿಗೆ ಮಾಜಿ ಜಿಪಂ ಸದಸ್ಯೆ ವೀಣಾ ಕಾಶಪ್ಪನವರ್ ಮನವಿ ಮಾಡಿದರು.
ಅವರು ಮಾತನಾಡಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರು 9 ದಿವಸಗಳಿಂದ ಬಿಸಿಲು, ಗಾಳಿಗೆ ಮೈಯೊಡ್ಡಿ ಬಯಲಿನಲ್ಲಿ ದಿನ ದೂಡುತ್ತಿದ್ದಾರೆ. ಇನ್ನು ಅವರನ್ನ ಕಾಯಿಸಬೇಡಿ ದಯವಿಟ್ಟು ಬೇಗ ಅವರಿಗೆ ನಿವೇಶನ ಒದಗಿಸುವ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದರು.
ಈ ಮನವಿಗೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಅವರೂ ಸಹಿತ ನಿರ್ವಸ್ಥಿಕರ ಸಮಸ್ಯೆಗಳನ್ನು ಆಲಿಸಿ ಒಂದು ವಾರದೊಳಗೆ ಪುರಸಭೆಯಿಂದ ಸ್ಥಳ ಗುರುತಿಸಿ ಆಡಳಿತ ಗಮನಕ್ಕೆ ತಂದು ಅವರಿಗೆ ನಿವೇಶನ ದೊರುಕುವ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಳೆದ ಎಪ್ರಿಲ್ 12ರಂದು ಕಾಶಪ್ಪನವರ್ ಭೇಟಿ ನೀಡಿ ಸಮಸ್ಯೆಗಳನ್ನು ಕೇಳಿ ಮತ್ತು ಕಣ್ಣಾರೆ ಕಂಡು ನಾನು ನಿಮ್ಮ ಸಹಾಯಕ್ಕೆ ಸದಾ ಸಿದ್ಧಳಿದ್ದೇನೆ ತಾವು ಧೈರ್ಯದಿಂದ ಇರಿ ಎಂದು ಸಂತ್ರಸ್ತರಿಗೆ ಸಮಾಧಾನ ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು.