ದೇವರಹಿಪ್ಪರಗಿ 18: ಸ್ವಾಭಿಮಾನದಿಂದ ಬದುಕು ನಡೆಸಲು ಉದ್ಯೋಗ ಹಾಗೂ ನೆಲೆಸಲು ಒಂದು ಸೂರಿನ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಮನೆ ಇಲ್ಲದ ಸಂಕಷ್ಟದಲ್ಲಿರುವವರನ್ನು ಆಯ್ಕೆ ಮಾಡಿ, ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ವಾಸ್ತಲ್ಯ ಮನೆಗಳನ್ನು ನಿರ್ಮಿಸಿ ನೀಡಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ತಿಳಿಸಿದರು.
ತಾಲೂಕಿನ ಕೊಂಡಗೂಳಿ ಗ್ರಾಮದ ನಿವಾಸಿ ಮೌಲಾನಬಿ ನದಾಫ್ ಅವರಿಗೆ ಮಾತೃಶ್ರೀ ಡಾ.ಹೇಮಾವತಿ ಹೆಗ್ಗಡೆ ಅವರ ಜ್ಞಾನವಿಕಾಸ ಕಾರ್ಯಕ್ರಮದಡಿ ನಿರ್ಮಿಸಿದ ವಾಸ್ತಲ್ಯ ಮನೆಯನ್ನು ಸೋಮವಾರದಂದು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಿವಾನಂದ ಹಾಗೂ ವೀರಗಂಟಿ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಮನೆ ಹಸ್ತಾಂತರ ಮಾಡಲಾಯಿತು.
ಜಿಲ್ಲಾ ರಿಕವರಿ ಯೋಜನಾಧಿಕಾರಿಗಳಾದ ಕೃಷ್ಣಮೂರ್ತಿ, ವಿಶ್ವನಾಥ್, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಪ್ರತಿನಿಧಿ ಸಂಗಮೇಶ ದಂಡೋತಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಸಂಘದ ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.