ಜಿಲ್ಲೆಯಾದ್ಯಂತ ಸಡಗರದಿಂದ ವರಮಹಾಲಕ್ಷ್ಮಿ ಪೂಜೆ ಆಚರಣೆ


ಲೋಕದರ್ಶನ ವರದಿ

ಬಳ್ಳಾರಿ 24: ಗಣಿ ನಾಡು ಬಳ್ಳಾರಿ ಜಿಲ್ಲೆಯಾದ್ಯಂತ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆ ಸಮೀಪದ ನಾನಾ ಪ್ರಸಿದ್ಧ ದೇವಾಲಯಕ್ಕೆ ಮಹಿಳೆಯರು, ಮಕ್ಕಳು ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ಹರಿದು ಬಂದ ಭಕ್ತಸಾಗರ: ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಿ ದೇವಾಲಯ, ರಾಮೇಶ್ವರಿ ನಗರದ ವೆಂಕಟೇಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ಕುರಗೋಡು ದೊಡ್ಡಬಸವೇಶ್ವರ ದೇವಾಲಯ, ಸಂಡೂರು ಕುಮಾರಸ್ವಾಮೀ ದೇವಾಲಯ, ವಿಶ್ವ ವಿಖ್ಯಾತ ಹಂಪಿ ವಿರುಪಾಕ್ಷೇಶ್ವರ ದೇವಾಲಯ ಸೇರಿದಂತೆ ನಾನಾ ಪ್ರಸಿದ್ಧ ದೇವಾಲಯದಲ್ಲಿ ಹಬ್ಬದ ನಿಮಿತ್ತ ಭಕ್ತರ ದಂಡೇ ಹರಿದು ಬಂದಿತ್ತು. 

 ದೇವಾಲಯದ ಸಮೀತಿ ಅವರು ಆಗಮಿಸಿದ ಎಲ್ಲ ಭಕ್ತರು ದರ್ಶನ ಪಡೆಯಲು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಸರದಿಯಲ್ಲಿ ನಿಂತು ಭಕ್ತರು ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು. ಎಲ್ಲ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.