ವಾಲ್ಮೀಕಿ ಜಯಂತಿ, ಆದರ್ಶ ಸಮಾಜ ನಿರ್ಮಾಣದ ತತ್ವಗಳು ರಾಮಾಯಣದಲ್ಲಿವೆ : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ವಾಲ್ಮೀಕಿ ಜಯಂತಿ, ಆದರ್ಶ ಸಮಾಜ ನಿರ್ಮಾಣದ ತತ್ವಗಳು ರಾಮಾಯಣದಲ್ಲಿವೆ : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ Valmiki Jayanti, principles of building an ideal society are in the Ramayana: Deputy Commissioner La

ವಾಲ್ಮೀಕಿ ಜಯಂತಿ, ಆದರ್ಶ ಸಮಾಜ ನಿರ್ಮಾಣದ ತತ್ವಗಳು ರಾಮಾಯಣದಲ್ಲಿವೆ : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ಕಾರವಾರ 07:  ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣ ಮಹಾಕಾವ್ಯದಲ್ಲಿ ಇಡೀ ಭಾರತಕ್ಕೆ  ಅನ್ವಯವಾಗುವಂತಹ ಆದರ್ಶ ಸಮಾಜ ನಿರ್ಮಾಣಕ್ಕೆ ಅಗತ್ಯವಿರುವ ಸಂದೇಶಗಳಿವೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಈ ಸಂದೇಶಗಳನ್ನು ಪಾಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ  ಅಭಿಪ್ರಾಯಪಟ್ಟರು. ಅವರು ಮಂಗಳವಾರ, ಜಿಲ್ಲಾಡಳಿತ, ಜಿ. ಪಂ., ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ  ಹಾಗೂ ನಗರಸಭೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಕಾರವಾರದ  ಕಲ್ಯಾಣ ಮಂಟಪದಲ್ಲಿ ನಡೆದ  ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯೂ ತನ್ನಲ್ಲಿರುವ ದುರ್ಗುಣಗಳನ್ನು ತ್ಯಜಿಸಿ, ತನ್ನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು ಎಂಬುದಕ್ಕೆ ವಾಲ್ಮೀಕಿ ಅವರೇ ಮಾದರಿ. ಬೇಡನಾಗಿದ್ದ ವ್ಯಕ್ತಿ ಮಹರ್ಷಿಯಾಗಿ,ಆದಿಕವಿಯಾಗಿ ಬದಲಾದ ಬಗ್ಗೆ ಮಹರ್ಷಿ ವಾಲ್ಮೀಕಿ ಅವರ ಜೀವನದಿಂದ ತಿಳಿಯಬಹುದಾಗಿದೆ. ರಾಮಾಯಣದಲ್ಲಿರುವ 24000 ಶ್ಲೋಕಗಳನ್ನು ಯಾವುದೇ ಭಾಷೆಗೆ ತರ್ಜುಮೆ ಮಾಡಿದರೂ ಅದರಲ್ಲಿನ ಮೂಲ ಹೋಲಿಕೆಯನ್ನು ಕಾಣಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.  ನಾಯಕತ್ವದ ಗುಣಗಳು, ಮಹಿಳಾ ಸಬಲೀಕರಣ, ಆದರ್ಶ ರಾಜ್ಯದ ಕಲ್ಪನೆಯನ್ನು ರಾಮನ ಮೂಲಕ ರಾಮಾಯಣ ಮಹಾಕಾವ್ಯದಲ್ಲಿ ಕಾಣಬಹುದಾಗಿದೆ. ರಾಮಾಯಣವು ಪ್ರತಿಯೊಬ್ಬ ಭಾರತೀಯ ಜೀವನದಲ್ಲಿಯೂ ಹಾಸುಹೊಕ್ಕಾಗಿದ್ದು , ಅದರಲ್ಲಿರುವ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು . ಪರಸ್ಪರ ಸಹಕಾರದಿಂದ ಮಾದರಿ ಮತ್ತು ಆದರ್ಶ ಸಮಾಜ ನಿರ್ಮಾಣ ಮಾಡಬೇಕಿದೆ. ಅವಕಾಶ ವಂಚಿತರಿಗೆ ನೆರವು ನೀಡುವ ಮೂಲಕ ಅವರನ್ನೂ ಕೂಡಾ ಅಭಿವೃಧ್ದಿಯೆಡೆಗೆ ಕರೆದೊಯ್ಯಬೇಕು ಎಂದು ಲಕ್ಷ್ಮಿಪ್ರಿಯಾ ನುಡಿದರು.ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ರವಿರಾಜ ಚಂದ್ರಹಾಸ ಅಂಕೋಲೆಕರ ಮಾತನಾಡಿ, ಸತತ ಪ್ರಯತ್ನದಿಂದ ಅಸಾಮಾನ್ಯ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅವರೇ ಸಾಕ್ಷಿ. ಬೇಡನಾಗಿದ್ದು ನಿರಂತರ ಓದಿನಿಂದ  ಮಹರ್ಷಿಯಾಗಿ ಬದಲಾಗಿ,  

ರಾಮಾಯಣ ಮಹಾಕಾವ್ಯ ರಚಿಸಿದ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದೀಲೀಷ್ ಶಶಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯದ ಮೂಲಕ ಜೀವನದಲ್ಲಿ ಪಾಲಿಸಬೇಕಾದ ಮಾನವೀಯ  ಮೌಲ್ಯಗಳ ಬಗ್ಗೆ ತಿಳಿಸಿದ್ದು, ಇದು ಎಲ್ಲರಿಗೂ ಸ್ಪೂರ್ತಿಯಾಗಬೇಕು ಮತ್ತು ಈ ಕೃತಿಯಲ್ಲಿನ ತತ್ವಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ,  

ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಝೂಪಿಶಾನ್ ಹಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಲ್ಲಾ ಭಕ್ಷ್‌, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ, ಸದಸ್ಯ  ಹನುಮಂತ ತಳವಾರ್,  ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಮಾನತೆ , ಸಹಬಾಳ್ವೆ, ಭಾತೃತ್ವ ಸಾರುವ  ಸಂವಿಧಾನ ಪೀಠಿಕೆಯ ಪ್ರಮಾಣ    ಸ್ವೀಕರಿಸಲಾಯಿತು