ದಿವ್ಯ ಶಕ್ತಿಯ ಮಹಾನ್ ಪ್ರತಿಭೆ ವಾಲ್ಮೀಕಿ : ಡಾ. ವೀಣಾ

ಗದಗ 17: ಪ್ರತಿಭೆ  ಯಾರ ಹುಟ್ಟಿನ ಉಡುಗೊರೆಯೂ ಅಲ್ಲ, ಸಾಧನೆಯ  ಗಳಿಕೆ  ಎಂಬುವುದನ್ನು ರಾಮಾಯಣ ಮಹಾಕಾವ್ಯ  ಬರೆದು ತೋರಿಸಿದ ಅಗಾಧ ಪ್ರತಿಭೆ ಆದಿ ಕವಿ ವಾಲ್ಮೀಕಿಯವರು, ಅಂತಹವರ ಬದುಕು ಮತ್ತು ಸಾಧನೆ ನಮಗೆಲ್ಲ ಪ್ರೇರಣೆಯಾಗಲಿ ಎಂದು ಕೆ.ಎಲ್ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ  ಉಪಪ್ರಾಚಾರ್ಯರಾದ ಡಾ. ವೀಣಾ ಈ ತಿಳಿಸಿದರು.

ನಗರದ ಕೆ.ಎಲ್ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಅವರು ಮಹರ್ಷಿ ವಾಲ್ಮೀಕಿಯವರ ಬಗ್ಗೆ ಕಟ್ಟುಕತೆಗಳಿಂದ ಹುಟ್ಟಿಕೊಂಡಿರುವ ಪೂರ್ವಗ್ರಹಗಳನ್ನು ಪಕ್ಕಕ್ಕಿಟ್ಟು ನಿಜ ಜೀವನಗಾಥೆಯನ್ನು ತಿಳಿದಾಗ ಸ್ಪೂರ್ತಿ ಮತ್ತು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬಹುದು. ಸಂಸ್ಕೃತದಲ್ಲಿ ಮೊಟ್ಟ ಮೊದಲಿಗೆ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿರುವ ಆದಿಕವಿ ಮಹರ್ಷಿ ವಾಲ್ಮೀಕಿಯವರನ್ನು ಸ್ಮರಿಸಿಕೊಂಡು ಗೌರವ ಸಲ್ಲಿಸುವ ಮತ್ತು ಕಾವ್ಯದ ಮೂಲಕ ನೀಡಿರುವ ಆದರ್ಶ ಮೌಲ್ಯಗಳನ್ನು ಯುವ ಪೀಳಿಗೆ ಪಾಲಿಸುವ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ. ಕುಮಾರಿ ಪವಿತ್ರಾ ಭಜಂತ್ರಿ ಪ್ರಾರ್ಥಿಸಿದರು. ಪ್ರೊ. ವಿಶಾಲ ತೆಳಗಡೆ ಸರ್ವರಿಗೂ ಸ್ವಾಗತಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು ಪ್ರೊ. ಹರ್ಷ ನಿಲೋಗಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಅಂದಯ್ಯ ಅರವಟಗಿಮಠ, ಪ್ರೊ. ಶ್ವೇತಾ ರಾಚಯ್ಯನವರ, ವೀಣಾ ತಿರ್ಲಾಪುರ ಮುಂತಾದ ಎಲ್ಲ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.