ಟ್ರಾಫಿಕ್, ಸತತ ಮಳೆ: ಭಕ್ತರ ಪರದಾಟ

ಉಗರಗೋಳ 17: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶೀಗಿ ಹುಣ್ಣಿಮೆ ಅಂಗವಾಗಿ ಗುರುವಾರ ನಡೆದ ಜಾತ್ರೆಗೆ ಭಕ್ತಸಾಗರವೇ ಹರಿದುಬಂದಿತ್ತು. ಆದರೆ, ಸತತ ಮಳೆ ಹಾಗೂ ಟ್ರಾಫಿಕ್ ಸಮಸ್ಯೆಯಿಂದ ಭಕ್ತರು ಪರದಾಡುವಂತಾಯಿತು. 

ಈ ಹುಣ್ಣಿಮೆಯಿಂದ ಐದು ಹುಣ್ಣಿಮೆಗಳವರೆಗೆ ಯಲ್ಲಮ್ಮನಗುಡ್ಡಕ್ಕೆ ಭಕ್ತರು ತಪ್ಪದೆ ಆಗಮಿಸುತ್ತಾರೆ. ಶೀಗಿ ಹುಣ್ಣಿಮೆಯಂದು ಯಲ್ಲಮ್ಮನ ದರ್ಶನ ಪಡೆದು ತಮ್ಮ ಕೃಷಿಭೂಮಿಗೆ ತೆರಳಿ ಚೆರಗ ಚೆಲ್ಲಿ, ಈ ಬಾರಿ ಉತ್ತಮ ಫಸಲು ಬರಲೆಂದು ಭೂತಾಯಿಯಲ್ಲಿ ಪ್ರಾರ್ಥಿಸುತ್ತಾರೆ. ಈ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಗುರುವಾರವೂ ಲಕ್ಷಲಕ್ಷ ಸಂಖ್ಯೆಯಲ್ಲಿ ರೈತರು ಆಗಮಿಸಿ, 'ಎಲ್ಲರ ಅಮ್ಮ' ಯಲ್ಲಮ್ಮನ ದರ್ಶನ ಪಡೆದರು. 

ವಿಜಯಪುರ, ಗದಗ, ಕೊಪ್ಪಳ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಿಂದ ಏಕಕಾಲಕ್ಕೆ ಸಾವಿರಾರು ವಾಹನ ಬಂದಿದ್ದರಿಂದ ಉಗರಗೋಳ-ಯಲ್ಲಮ್ಮನಗುಡ್ಡ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಗುಡ್ಡದಿಂದ ನಾಲ್ಕೈದು ಕಿ.ಮೀ. ದೂರದವರೆಗೂ ವಾಹನ ಸಾಲುಗಟ್ಟಿ  ನಿಂತಿದ್ದವು. ಇದರ ಮಧ್ಯೆ ಮಳೆಯೂ ಸುರಿದಿದ್ದದಿಂದ ಹಾಗೂ ಉಗರಗೋಳದಲ್ಲಿ ಹಳ್ಳದ ನೀರು ರಸ್ತೆಮೇಲೆ ಹರಿದಿದ್ದರಿಂದ ಭಕ್ತರು ಹೈರಾಣಾದರು. ಉಗರಗೋಳದ ಎಲ್ಲ ರಸ್ತೆಗಳಲ್ಲೂ ಟ್ರಾಫಿಕ್ ಮಿತಿಮೀರಿತ್ತು. 

ಸಂಚಾರ ಸಮಸ್ಯೆ ನಿಯಂತ್ರಣಕ್ಕಾಗಿ ಪೊಲೀಸರು ಹರಸಾಹಸಪಟ್ಟರು. ಸುತ್ತಲಿನ ಗ್ರಾಮಸ್ಥರೂ ಬಳ್ಳಾರಿ, ನವಲಗುಂದ, ರಾಮದುರ್ಗ, ನರಗುಂದ, ಸವದತ್ತಿಗೆ ತೆರಳಲು ಪರದಾಡಿದರು.