ಧ್ವನಿ ಬದಲಾದರೆ ಬದುಕೇ ಬದಲಾಗುತ್ತದೆ : ಶ್ರೀ ರಂಭಾಪುರಿ ಜಗದ್ಗುರುಗಳು

ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)ಅಕ್ಟೋಬರ್ 17:  ಬದುಕಿನಲ್ಲಿ ಬರುವ ಬಹಳಷ್ಟು ಸಮಸ್ಯೆಗಳು ಸೃಷ್ಠಿಯಾಗುವುದು ನಮ್ಮ ಮಾತಿನ ಧ್ವನಿಯಿಂದ. ಏನು ಹೇಳುತ್ತೇವೆ ಎನ್ನುವುದಕ್ಕಿಂತಲೂ ಹೇಗೆ ಹೇಳುತ್ತೇವೆ ಎಂಬುದೇ ಮುಖ್ಯ. ಧ್ವನಿ ಬದಲಾದರೆ ಬದುಕೇ ಬದಲಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.  

ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.  

ಕತ್ತಲನ್ನು ದೂಷಿಸುವುದರ ಬದಲಾಗಿ ದೀಪ ಬೆಳಗಿದರೆ ಕತ್ತಲು ತಾನಾಗಿ ಹೊರಟು ಹೋಗುತ್ತದೆ. ಗೆದ್ದವರು ಸಂತೋಷದಿಂದ ಇದ್ದರೆ ಸೋತವರು ಯೋಚಿಸುತ್ತಾ ಇರುತ್ತಾರೆ. ಇವೆರಡೂ ಶಾಶ್ವತವಲ್ಲ ಎಂದು ತಿಳಿದವರು ಪ್ರತಿ ದಿನವನ್ನು ಹೊಸತನದೊಂದಿಗೆ ಕಳೆಯುತ್ತಾರೆ. ಬದುಕು ನಾವು ಬದುಕಲಿಕ್ಕೆ ಹೊರತು ಪರರನ್ನು ಮೆಚ್ಚಿಸಲಿಕ್ಕೆ ಅಲ್ಲ. ಎತ್ತರಕ್ಕೆ ಏರಬಯಸುವ ವ್ಯಕ್ತಿ ಏಣಿ ಕಟ್ಟುವ ಕಾರ್ಯದಲ್ಲಿ ನಿರತನಾಗಿರುತ್ತಾನೆ ಹೊರತು ಇನ್ನೊಬ್ಬರ ಏಳ್ಗೆಗೆ ಕಲ್ಲು ಹಾಕುವುದಿಲ್ಲ. ವೀರಶೈವ ಧರ್ಮ ಸಂವಿಧಾನದಲ್ಲಿ ಜೀವನ ವಿಕಾಸಕ್ಕೆ ಹಾಗೂ ಸುಖ ಶಾಂತಿ ಬದುಕಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಅನ್ವಯಿಸುತ್ತವೆ ಎಂದರು. 

ಇದೇ ಸಂದರ್ಭದಲ್ಲಿ ಹೂಲಿ ಶ್ರೀ ಗುರು ಸಿದ್ಧನಂಜೇಶ ವಿರಚಿತ “ಅದ್ಭುತ ಕಾಲಜ್ಞಾನ” ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು. ಈ ಪವಿತ್ರ ಸಮಾರಂಭದಲ್ಲಿ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಮಳಲಿಮಠದ ಡಾಽಽ ನಾಗಭೂಷಣ ಶಿವಾಚಾರ್ಯರು, ಕರ​‍್ುರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯರು, ಹಾಸನ ತಣ್ಣಿರಹಳ್ಳಿಮಠದ ವಿಜಯಕುಮಾರ ಸ್ವಾಮೀಜಿ, ಮುಳವಾಡ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಕುಂಟೋಜಿ ಕರವೀರೇಶ್ವರ ಹಿರೇಮಠದ ರುದ್ರಮುನಿ ದೇವರು, ಅರಸೀಕೆರೆ ಕೆ.ವಿ.ನಿರ್ವಾಣಸ್ವಾಮಿ, ಜಿ.ಎನ್‌.ಷಡಕ್ಷರಿ, ಮುರುಂಡಿ ಶಿವಯ್ಯ, ಹಾಸನದ ಶಿವಕುಮಾರ್ ಕಟ್ಟಾಯ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. 

ಸೀಗೆ ಹುಣ್ಣಿಮೆ ಪ್ರಯುಕ್ತ ಭೂ ತಾಯಿಗೆ ವಿಶೇಷ ಪೂಜೆ ಜರುಗಿತು. ಪ್ರಾತ:ಕಾಲ ಎಲ್ಲ ದೈವಗಳಿಗೆ ವಿಶೇಷ ಪೂಜೆ ಅಷ್ಟೋತ್ತರ ಮಹಾಮಂಗಲ ಜರುಗಿದವು.