ಲೋಕದರ್ಶನ ವರದಿ
ಶಿಶುಗಳಿಗೆ 12 ಮಾರಕ ರೋಗಗಳ ವಿರುದ್ಧ ತಪ್ಪದೇ ಲಸಿಕೆ ಹಾಕಿಸಿ: ಶಿವಾನಂದ ವ್ಹಿ.ಪಿ.
ಕೊಪ್ಪಳ 29: ಶಿಶುಗಳಿಗೆ 12 ಮಾರಕ ರೋಗಗಳ ವಿರುದ್ಧ ತಪ್ಪದೇ ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಿ, ಮಕ್ಕಳ ಆರೋಗ್ಯ ರಕ್ಷಣೆ ಮಾಡಬೇಕು ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ, ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗಂಗಾವತಿ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಸಿದ್ದಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೋಮವಾರ ಸಿದ್ದಾಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿಶೇಷ ಆರೋಗ್ಯ ಅರಿವು ಆಂದೋಲನ" ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯ ಸೇವಾ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಿಸುವ ಉದ್ದೇಶದಿಂದ ಸರಕಾರ ವಿವಿಧ ಜಾಗೃತಿ ಮಾಧ್ಯಮದ ಮೂಲಕ ಅರಿವು ಮೂಡಿಸುತ್ತಿದೆ. ಪ್ರತಿಯೊಂದು ಹೆರಿಗೆಯನ್ನು ಆಸ್ಪತ್ರೆಯಲ್ಲಿ ಮಾಡಿಸಬೇಕು. ಮಗು ಹುಟ್ಟಿದ ಅರ್ಧ ಗಂಟೆಯ ಒಳಗೆ ತಾಯಿಯ ಎದೆಹಾಲು ನೀಡಬೇಕು. 6 ತಿಂಗಳವರೆಗೆ ಮಗುವಿಗೆ ತಾಯಿಯ ಎದೆಹಾಲು ಮಾತ್ರ ನೀಡಬೇಕು. ಇದರ ಬದಲಿಗೆ ಬೇರೇನೂ ನೀಡಬಾರದು. 6 ತಿಂಗಳ ನಂತರ ಪೂರಕ ಪೌಷ್ಠಿಕ ಆಹಾರ ನೀಡಬೇಕು. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 3 ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಕಾರ್ಯಕ್ರಮ ತಾತ್ಕಾಲಿಕ ವಿಧಾನಗಳಾದ ಪಿ.ಪಿ.ಐ.ಯು.ಸಿ.ಡಿ, ಐ.ಯು.ಸಿ.ಡಿ, ಛಾಯಾ, ಮಾಲಾ-ಎನ್ ಮಾತ್ರೆಯನ್ನು ನುಂಗುವುದು, ಪ್ರತಿ 3 ತಿಂಗಳಿಗೊಮ್ಮೆ ಅಂತರ ಚುಚ್ಚುಮದ್ದು ಹಾಕಿಸುವುದು ಮತ್ತು ಪುರುಷರಿಗೆ ನಿರೋಧ್ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುತ್ತವೆ. 2 ಮಕ್ಕಳಾದ ಮೇಲೆ ಸಂತಾನ ನಿರೋಧ್ ಶಸ್ತ್ರಚಿಕಿತ್ಸೆ ಹಾಗೂ ಪುರುಷರಿಗೆ ಎನ್.ಎಸ್.ವಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದ್ದು, ಸರ್ಕಾರದ ಈ ಎಲ್ಲಾ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಹುಸೇನ್‌ಭಾಷಾ ಅವರು ಮಾತನಾಡಿ, ಸೋಂಕಿತ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ, ಮೆದಳುಜ್ವರ, ಆನೆಕಾಲುರೋಗ ನಿಯಂತ್ರಣದಲ್ಲಿಡಲು ಸೊಳ್ಳೆ ಉತ್ಪತ್ತಿ ತಾಣಗಳಾದ ನೀರು ಸಂಗ್ರಹ ಪರಿಕರಗಳನ್ನು ವಾರದಲ್ಲಿ 2 ಸಲ ಸ್ವಚ್ಛವಾಗಿ ತೊಳೆದು, ಒಣಗಿಸಿ, ಪುನಃ ನೀರು ತುಂಬುವಂತೆ ತಿಳಿಸುತ್ತಾ ಇತರೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಆಯುಷ್ ವೈದ್ಯರಾದ ಡಾ.ಸ್ಮೀತಾ ಅವರು ಕ್ಷಯರೋಗ ನಿರ್ಮೂಲನೆ ಕುರಿತು, ಸಿ.ಹೆಚ್.ಓ ಪರಶುರಾಮ ಅವರು ಅಸಾಂಕ್ರಾಮಿಕ ರೋಗಗಳು ಮತ್ತು ಅವುಗಳ ನಿಯಂತ್ರಣ ಕ್ರಮಗಳ ಬಗ್ಗೆ, ಮಾನಸಿಕ ಆರೋಗ್ಯ, ಕುಷ್ಠರೋಗ ನಿರ್ಮೂಲನೆ ಕುರಿತು ವಿವರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಾರ್ಡಿನ ಮುಖಂಡರಾದ ಅಶೋಕ ರಾಠೋಡ್, ನಾಗಮ್ಮ, ಪ್ರಾಥಮಿ ಆರೋಗ್ಯ ಸುರಕ್ಷಾಧಿಕಾರಿಗಳಾದ ರೇಖಾ, ಗಾಯತ್ರಿ, ಶ್ರೀದೇವಿ, ಆರೋಗ್ಯ ನೀರೀಕ್ಷಣಾಧಿಕಾರಿ ಬಸವಣ್ಣಯ್ಯ, ಆಶಾ ಕಾರ್ಯಕರ್ತೆಯರಾದ ಪುಷ್ಪಾ, ಚನ್ನಮ್ಮ ಹಾಗೂ ವೀರುಪಮ್ಮ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರೆ ಸಿಬ್ಬಂದಿಗಳು, ನಾಗರಿಕರು, ಗರ್ಭಿಣಿಯರು, ತಾಯೆಂದಿರು ಉಪಸ್ಥಿತರಿದ್ದರು.