ಬೆಂಗಳೂರು, ಮಾ 23 ,ರಾಜ್ಯದ ಬೆಂಗಳೂರು, ಧಾರವಾಡ, ರಾಯಚೂರು ಹಾಗೂ ಶಿವಮೊಗ್ಗದಲ್ಲಿರುವ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಮತ್ತು ಗುತ್ತಿಗೆ ಆಧಾರಿತ ಸಿಬ್ಬಂದಿಗಳಿಗೆ ಮಾ. 23 ರಿಂದ ಮಾ. 31ರವರೆಗೆ ರಜೆ ನೀಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಮಾ.21ರಂದು ಹೊರಡಿಸಿರುವ ಪತ್ರದನ್ವಯ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವೇತನ ಸಹಿತ ರಜೆ ನೀಡಲು ಸಚಿವರು ಸೂಚಿಸಿದ್ದಾರೆ.ಮಾ 14 ರಿಂದ 31ರವರೆಗೆ ವಿದ್ಯಾರ್ಥಿಗಳಿಗೆ ಈಗಾಗಲೇ ರಜೆಯನ್ನು ಘೋಷಿಸಲಾಗಿದೆ.ರಜಾ ಸಮಯದಲ್ಲಿ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಶೋಧನೆಗೆ ಸಂಬಂಧಿಸಿದ ಸಂಶೋಧನ ಅಧ್ಯಯನ ಪಠ್ಯಕ್ರಮವನ್ನು ಆನ್‌ಲೈನ್ ಮೂಲಕ ಅಭಿವೃದ್ಧಿ ಪಡಿಸುವಂತೆ ಹಾಗೂ ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಪ್ರಶ್ನೆ ಬ್ಯಾಂಕ್ ತಯಾರಿಸಲು ಮತ್ತು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ತಂಗಲು ಸುರಕ್ಷಿತ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.