ನವದೆಹಲಿ, ಅ 15: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಭಾರತದ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಅಭಿನಂದನೆ ಸಲ್ಲಿಸಿರುವ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ದಾದಾ ನೇತೃತ್ವದಲ್ಲಿ ಭಾರತದ ಕ್ರಿಕೆಟ್ ಏಳಿಗೆ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವವರಲ್ಲಿ ಏಕೈಕ ವ್ಯಕ್ತಿ ಸೌರವ್ ಗಂಗೂಲಿ ಆಗಿದ್ದಾರೆ. ಆದ್ದರಿಂದ ಮುಂದಿನ ಬಿಸಿಸಿಐ ಅಧ್ಯಕ್ಷರಾಗುವುದು ಸೌರವ್ ಗಂಗೂಲಿ ಬಹುತೇಕ ಖಚಿತವಾಗಿದೆ. ಈ ಬಗ್ಗೆ ಸ್ಪಷ್ಟತೆ ಸಿಗುತ್ತಿದ್ದಂತೆ ವಿವಿಎಸ್ ಲಕ್ಷ್ಮಣ್ ಅವರು ಟ್ವಿಟರ್ ನಲ್ಲಿ ಸಹ ಮಾಜಿ ಆಟಗಾರನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ, ನಿಮ್ಮ ಸಾರಥ್ಯದಲ್ಲಿ ಭಾರತೀಯ ಕ್ರಿಕೆಟ್ ಇನ್ನಷ್ಟು ಏಳಿಗೆ ಸಾಧಿಸಲಿದೆ ಹಾಗೂ ಅಧ್ಯಕ್ಷ ಸ್ಥಾನದಲ್ಲಿ ನಿಮಗೆ ಯಶ ಲಭಿಸಲಿ ಎಂದು ಹಾರೈಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ಧನ್ಯವಾದಗಳು ವಿವಿಎಸ್, ಇದರಲ್ಲಿ ನಿಮ್ಮ ಕೊಡುಗೆ ಕೂಡ ಅತಿ ಮುಖ್ಯ ಎಂದು ಹೇಳಿದ್ದಾರೆ. ವಿವಿಎಸ್ ಲಕ್ಷ್ಮಣ್ ಅವರು ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಜತೆ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಈ ವೇಳೆ ಭಾರತ ತಂಡದ ಮುಖ್ಯ ಕೋಚ್ ಆಗಿ ಅನಿಲ್ ಕುಬ್ಳೆ ನೇಮಿಸಿದ್ದರು. 2017ರಲ್ಲಿ ಕುಂಬ್ಳೆ ಸ್ಥಾನಕ್ಕೆ ರಾಜೀನಾಮೆ ಸಲಲಿಸಿದ ಬಳಿಕ ಕ್ರಿಕೆಟ್ ಆಡಳಿತ ಮಂಡಳಿ ರವಿಶಾಸ್ತ್ರಿ ಅವರನ್ನು ನೇಮಿಸಿತ್ತು.