ಪಿಯು ಘಟಿಕೋತ್ಸವದಿಂದ ವಿದ್ಯಾರ್ಥಿನಿಯನ್ನು ಹೊರಗೆ ಕಳುಹಿಸಿದ ವಿವಿ: ಎಂಎನ್‌ಎಂ ಖಂಡನೆ

ಪುದುಚೇರಿ, ಡಿ. 24 ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸಿದ್ದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿಯನ್ನು ಹೊರಗೆ ಕಳುಹಿಸಿದ್ದನ್ನು ಮಕ್ಕಲ್ ನೀಧಿ ಮಾಯಂ (ಎಂಎನ್‌ಎಂ) ನ ಪುದುಚೇರಿ ಘಟಕ ಮಂಗಳವಾರ ತೀವ್ರವಾಗಿ ಖಂಡಿಸಿದೆ.  ಸಿಎಎ ವಿರುದ್ಧ ಪ್ರತಿಭಟಿಸಿ ರಾಷ್ಟ್ರಪತಿಗಳ ಕೈಯಿಂದ ಪ್ರಶಸ್ತಿಗಳು ಮತ್ತು ಪ್ರಮಾಣಪತ್ರಗಳನ್ನು ಸ್ವೀಕರಿಸಲು ನಿರಾಕರಿಸಿದ ವಿದ್ಯಾರ್ಥಿಗಳ ಪಟ್ಟಿಯನ್ನು ವಿಶ್ವವಿದ್ಯಾಲಯ ಮೊದಲೇ ಪಟ್ಟಿಮಾಡಿ  ಅವರಿಗೆ ಆಹ್ವಾನ ನೀಡುವುದನ್ನು ತಪ್ಪಿಸಬಹುದಿತ್ತು ಎಂದು ಎಂಎನ್‌ಎಂ ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಎ.ಎಸ್. ಸುಬ್ರಮಣಿಯನ್ ಇಂದಿಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಆದರೆ, ಎಲ್ಲರನ್ನೂ ಸಮಾವೇಶಕ್ಕೆ ಆಹ್ವಾನಿಸಿ, ರಬೀಹಾ ಅಬ್ದುಲ್ ರಹೀಮ್‌ ಎಂಬ ವಿದ್ಯಾರ್ಥಿನಿಯನ್ನು ಹೊರಗೆ ಕಳುಹಿಸಿರುವುದನ್ನು ನಾವು ಖಂಡಿಸುತ್ತೇವೆ ಮತ್ತು ವಿಶ್ವವಿದ್ಯಾಲಯದ ಆಡಳಿತವು ಈ ಕೃತ್ಯಕ್ಕೆ ಮುಕ್ತ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಸಿಎಎಯನ್ನು ಪ್ರತಿಭಟಿಸಲು ಡಿಸೆಂಬರ್ 27 ರಂದು ಇಲ್ಲಿ ಆಡಳಿತಾರೂಢ ಕಾಂಗ್ರೆಸ್ ಕರೆ ನೀಡಿದ ಬಂದ್ ,ಆರ್ಥಿಕ ಕುಸಿತದ ಸಮಯದಲ್ಲಿ ನಿಜವಾಗಿಯೂ ಅಗತ್ಯವಿದೆಯೇ? ಎಂದು ಪುದುಚೇರಿಯಲ್ಲಿನ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.ಸಿಎಎಗೆ ವಿರೋಧ ವ್ಯಕ್ತಿಪಡಿಸುವುದಾದರೆ, ಮುಖ್ಯಮಂತ್ರಿ ವಿ ನಾರಾಯಣಸಾಮಿ ಅವರು ಪುದುಚೇರಿಗೆ ರಾಷ್ಟ್ರಪತಿ ಭೇಟಿಯನ್ನು ಬಹಿಷ್ಕರಿಸಬಹುದಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನಾರಾಯಣಸ್ವಾಮಿಯವರು ಮಾಡಬಹುದಾದ ಕೆಲಸವನ್ನು ಬಿಟ್ಟು ಮಾಡಬಾರದ ಕೆಲಸವನ್ನು ಮಾಡುತ್ತಿದ್ದಾರೆ ಎಂದು  ಸುಬ್ರಮಣಿಯನ್ ಟೀಕಿಸಿದ್ದಾರೆ.ನಿರಾಶ್ರಿತರೇ ಇಲ್ಲದ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಬಂದ್ ಘೋಷಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಆದ್ದರಿಂದ, ಮುಖ್ಯಮಂತ್ರಿ ತಮ್ಮ ಮಾತಿನ ಚಮತ್ಕಾರವನ್ನು ನಿಲ್ಲಿಸಬೇಕು ಮತ್ತು ಪುದುಚೇರಿಯ ಅಭಿವೃದ್ಧಿಗೆ ಸಹಾಯ ಮಾಡುವ ಮತ್ತು ಜನರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಎಂಎನ್‌ಎಂ ಅಧ್ಯಕ್ಷರು ಒತ್ತಾಯಿಸಿದ್ದಾರೆ.