ವಿಎಸ್‌ಕೆ ವಿವಿ ಕುಲಪತಿ ಡಾ.ಮುನಿರಾಜು ಸಲಹೆ ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ಗಾಂಧೀಜಿಯವರ ಕನಸು ನನಸಾಗುತ್ತದೆ
ಹೂವಿನಹಡಗಲಿ 27: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿ ತಮ್ಮ ಗ್ರಾಮವನ್ನು ಅಭಿವೃದ್ಧಿ ಪಡಿಸಿದರೆ ಗಾಂಧೀಜಿಯವರ ಚಿಂತನೆಗಳನ್ನು ಸಕಾರಗೊಳಿಸಿದಂತೆ ಎಂದು ವಿಎಸ್‌ಕೆ ವಿವಿ ಕುಲಪತಿ ಡಾ.ಮುನಿರಾಜು ಹೇಳಿದರು. ಪಟ್ಟಣದ ಜಿಬಿಆರ್ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವೀ.ವಿ.ಸಂಘ ಬಳ್ಳಾರಿಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಯುವಜನತೆಯ ಸದೃಢತೆಗೆ ಪ್ರೇರಣೆಯಾದ ಗಾಂಧೀಜಿ ತಾತ್ವಿಕತೆ ಎಂಬ ವಿಷಯದ ಕುರಿತು ನಡೆದ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಚಿಕ್ಕ, ಚಿಕ್ಕ ಕೆಲಸಗಳನ್ನು ಸಮರ್ಕವಾಗಿ ನಿಭಾಯಿಸುವ ಯೋಜನೆಗಳನ್ನು ಹಾಕಿಕೊಳ್ಳಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳು ದೊರಕುತ್ತಿವೆ. ಅವುಗಳನ್ನು ಬಳಸಿಕೊಳ್ಳಿ. ವಿಎಸ್‌ಕೆ ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿ ಮೂರು ತಿಂಗಳು ಕಳೆದಿವೆ. ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಅಂಕಪಟ್ಟಿಗಳ ವಿತರಿಸುವ ಕ್ರಮದಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುವುದು. ಪದವಿಯ ಬಿ.ಕಾಂ ವಿಭಾಗದಲ್ಲಿ ಪ್ರವಾಸೋದ್ಯಮ, ಗಣಕಯಂತ್ರ, ಬಿಎ ವಿಭಾಗದಲ್ಲಿ ನಾಟಕ, ಸಂಗೀತ, ಚಿತ್ರಕಲೆ ಸೇರಿದಂತೆ ಇತರೆ ವಿಭಾಗಗಳನ್ನು ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಪ್ರತಿದಿನ ದಿನ ಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು. ಆನ್‌ಲೈನ್‌ನಲ್ಲಿ ಜರ್ಮನ, ಪ್ರೆಂಟ್, ಸ್ಪ್ಯಾನೀಷ್ ಭಾಷೆಗಳ ಕಲಿಕೆಗೆ ತರಗತಿಗಳನ್ನು ಆರಂಭಿಸಲಾಗುವುದು. ಪ್ರಾಚಾರ್ಯ ಎಸ್.ಎಸ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧೀಜಿಯವರ ಆರ್ದಶ ಬದುಕು ಹಾಗೂ ಅವರ ತತ್ವಗಳನ್ನು ಯುವ ಪೀಳಿಗೆಗೆ ತಿಳಿಸುವ ತುರ್ತು ಅವಶ್ಯಕತೆ ಇದೆ. ಆದರೆ ನಾವು ಅವರನ್ನು ಮಾನಸಿಕವಾಗಿ ದೂರ ಮಾಡಿಕೊಳ್ಳುತ್ತಿದ್ದೇವೆ. ಅವರ ತತ್ವಗಳು ಸರ್ವಕಾಲಿಕವಾಗಿವೆ ಎಂದರು. ಕಾರ್ಯಕ್ರಮದ ಸಂಘಟಕಿ ಡಾ.ಅಬಿದ ಬೇಗಂ ಮಾತನಾಡಿ, ಯುವ ಪೀಳಿಗೆಯವರು ಗಾಂಧೀಜಿಯನ್ನು ನೆನಪು ಮಾಡಿಕೊಳ್ಳುವ ಸಂದರ್ಭಗಳು ಕಡಿಮಾಗುತ್ತಾ ಬರುತ್ತಿವೆ. ಇಂದಿಗೂ ಗಾಂಧೀಜಿಯವರು ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಅನೇಕರು ಹೇಳುತ್ತಾರೆ. ಅವರ ತತ್ವ ಮತ್ತು ಆದರ್ಶಗಳನ್ನು ಪಾಲಿಸುವವರಿಗಿಂದ ಅವುಗಳನ್ನು ಗಮನಿಸುವವರ ಸಂಖ್ಯೆ ಕಡಿಯಾಗುತ್ತಿದೆ ಎಂದರು. ವೀ.ವಿಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿ ಎಂದಾಕ್ಷಣ ಪ್ರಪಂಚಕ್ಕೆ ಭಾರತ ನೆನಪಿಗೆ ಬರುತ್ತದೆ. ವಿದ್ಯಾರ್ಥಿಗಳು ಅವರ ಆರ್ದಶಗಳನ್ನು ಪಾಲಿಸಬೇಕು ಎಂದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ ರೆಡ್ಡಿ ಮಾತನಾಡಿ, ಗಾಂಧೀಜಿಯವರು ಅಹಿಂಸಾ ಮಾರ್ಗದಿಂದ ಹೋರಾಟ ಮಾಡಿದರು. ದ್ವೇಷವನ್ನು ಮಾಡುವ ಮನಸ್ಥಿತಿಯಿಂದ ನಾವು ದೂರವಿದ್ದಾಗ ಮಾತ್ರ ಮಾನಸಿಕವಾಗಿ ಶಕ್ತರಾಗುತ್ತೇವೆ ಎಂದರು. ಪ.ಪೂ.ಕಾಲೇಜಿನ ಪ್ರಾಚಾರ್ಯ ಅಮರೇಗೌಡ ಎನ್ ಪಾಟೀಲ, ಆಡಳಿತ ಮಂಡಳಿಯ ಸದಸ್ಯರಾದ ಎಂ.ಮಲ್ಲಿಕಾರ್ಜುನ, ಎಸ್.ಪ್ರಕಾಶ್, ಕೆ.ಎಂ.ಉದಾಸಿ, ಕೆ.ಪ್ರಕಾಶ್, ಕಾರ್ಯಕ್ರಮದ ಸಂಯೋಜಕರಾದ ಡಾ.ಶರಣಪ್ಪ ಜಕ್ಕಲಿ, ಜಯಮಾಲ, ಐಕ್ಯೂಎಸಿ ಸಂಯೋಜಕಿ ಡಾ.ಮಹಿಮಾಜ್ಯೋತಿ ಹಾಗೂ ಇತರರಿದ್ದರು. ಹೂವಿನಹಡಗಲಿಯ ಜಿಬಿಆರ್ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ವಿ.ವಿ.ಸಂಘ ಬಳ್ಳಾರಿಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಯುವಜನತೆಯ ಸದೃಢತೆಗೆ ಪ್ರೇರಣೆಯಾದ ಗಾಂಧೀಜಿ ತಾತ್ವಿಕತೆ ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ವಿಎಸ್‌ಕೆ ವೀ.ವಿ ಕುಲಪತಿ ಡಾ.ಎಂ.ಮುನಿರಾಜು ಉದ್ಘಾಟಿಸಿದರು. ವೀ.ವಿ.ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಕಾರ್ಯಕ್ರಮದ ಸಂಘಟಕಿ ಡಾ.ಅಬಿದ ಬೇಗಂ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನರೆಡ್ಡಿ ಪ್ರಾಚಾರ್ಯ ಎಸ್.ಎಸ್.ಪಾಟೀಲ ಹಾಗೂ ಇತರರಿದ್ದರು.