ಬೆಂಗಳೂರು, ಮಾ.8,ಮಂಗಳೂರಿನಲ್ಲಿ ಪ್ರಯಾಣಿಕರೊಬ್ಬರಿಗೆ ಕೊರೋನಾ ಸೋಂಕು ತಗುಲಿದ ಶಂಕೆ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಆಸ್ಪತ್ರೆಗೆ ದಾಖಲಿಸಿರುವ ವ್ಯಕ್ತಿಯ ಹೆಸರನ್ನು ಆರೋಗ್ಯಾಧಿಕಾರಿಗಳು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ದುಬೈನಿಂದ ಆಗಮಿಸಿದ ಈ ವ್ಯಕ್ತಿಯಲ್ಲಿ ಜ್ವರದ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ವೆನ್ಲಾಕ್ ಆಸ್ಪತ್ರೆಯ ವಿಶೇಷ ಘಟಕಕ್ಕೆ ದಾಖಲಿಸಲಾಗಿದೆ.ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಓರ್ವ ಪ್ರಯಾಣಿಕನಲ್ಲಿ ಜ್ವರದ ಲಕ್ಷಣ ಇರುವುದು ಪತ್ತೆಯಾಗಿದೆ. ದುಬೈ ವಿಮಾನ ನಿಲ್ದಾಣದಿಂದ ತೆರಳುತ್ತಿದ್ದ ಸಂದರ್ಭದಲ್ಲಿ ನಡೆದ ತಪಾಸಣೆ ವೇಳೆ ಅವರನ್ನು ಯಾವುದೇ ಜ್ವರ ಲಕ್ಷಣ ಕಂಡುಬಂದಿಲ್ಲ ಎಂಬ ಮಾಹಿತಿ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ಪ್ರತ್ಯೇಕ ವಾರ್ಡ್ನಲ್ಲಿ ದಾಖಲಿಸಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಸಿಖಂದರ್ ಪಾಷ ಮಾಹಿತಿ ನೀಡಿದ್ದಾರೆ.ಪ್ರಯಾಣಿಕನಿಂದ ಗಂಟಲಿನ ದ್ರವರೂಪದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ‘ಸ್ಯಾಂಪಲ್’ನ್ನು ಬೆಂಗಳೂರು ವೈದ್ಯಕೀಯ ಆಸ್ಪತ್ರೆಗೆ (ಬಿಎಂಸಿ) ರವಾನಿಸಲಾಗಿದೆ. ಸೋಮವಾರದ ವೇಳೆಗೆ ವರದಿ ಲಭ್ಯವಾಗಲಿದೆ. ಒಂದು ವೇಳೆ ವರದಿಯಲ್ಲಿ ಸೋಂಕು ಇಲ್ಲವೆಂದು ದೃಢಪಟ್ಟಲ್ಲಿ ಸಂಪೂರ್ಣ ತಪಾಸಣೆ ನಂತರ ಪ್ರಯಾಣಿಕನನ್ನು ಬಿಡುಗಡೆ ಮಾಡಲಾಗುವುದು’ ಎಂದು ಅವರು ಹೇಳಿದರು.