ಬೆಂಗಳೂರು, ಮಾ 23, ಇಡೀ ಜಗತ್ತನ್ನೇ ತಲ್ಲಣಕ್ಕೀಡು ಮಾಡಿರುವ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತವೂ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೂ ವೈರಸ್ ಹರಡುವುದನ್ನು ತಡೆಗಟ್ಟಲು ಹರ ಸಾಹಸ ಪಡುವಂತಾಗಿದೆ. ಇದೇವೇಳೆ ಆರೋಗ್ಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಮಸ್ತ ಸಿಬ್ಬಂದಿ, ಪೊಲೀಸ್, ಪೌರ ಕಾರ್ಮಿಕರು, ವೈದ್ಯರು, ಶುಶ್ರೂಷಕರು ಸೇರಿದಂತೆ ಕೊರೋನ್ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿರುವ ಗೋದ್ರಾ ಚಿತ್ರ ತಂಡ, ಸೋಂಕು ವಿರುದ್ಧ ಜಾಗೃತಿ ಮೂಡಿಸಲು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದೆ. ಸೋಂಕಿನ ನಿಯಂತ್ರಣದ ಕುರಿತು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಕೆಲ ಅನುಮಾನಗಳ ಕಾರಣದಿಂದಾಗಿ ವೈರಸ್ ಹರಡು ವಂತಾಗಿದೆ.ವಿದೇಶದಿಂದ ಬರುವ ಕೆಲವರು ತಪಾಸಣೆಗೆ ಒಳಗಾಗದೇ ಇರುವಂತಹ ಉದಾಹರಣೆಗಳು ನಮ್ಮುಂದಿವೆ. ಅದಕ್ಕೆ ಕಾರಣ ಭಯ. ತಪಾಸಣೆಗೆ ಒಳಪಟ್ಟರೆ, ತಮ್ಮಲ್ಲಿ ಕೊರೋನಾ ವೈರಸ್ ಇದೆ ಎಂದು ಸಾಬೀತಾದರೆ, ಅವರ ಚಿಕಿತ್ಸೆ ಕುರಿತು ಜಾಗೃತಿ ಇಲ್ಲದೇ ಇರುವುದು ಅವರ ಆತಂಕಕ್ಕೆ ಕಾರಣವಾಗಿದೆ. ತಪಾಸಣೆ ಸ್ಥಳ, ಚಿಕಿತ್ಸಾ ವಿವರ, ಕುಟುಂಬದ ಸದಸ್ಯರನ್ನು ಭೇಟಿ ಆಗಲು ಬಿಡದೇ ಇರುವುದು, ಹೀಗೆ ನಾನಾ ಕಾರಣಗಳಿಂದಾಗಿ ತಪಾಸಣೆಗೆ ಒಳಗಾಗದೇ ಹೊರಗೆ ಓಡಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಕಟ್ಟು ನಿಟ್ಟಿನ ಜಾಗೃತಿ ಮಾಡಬೇಕಿದೆ.ಈಗಾಗಲೇ ಸಿನಿಮಾ ತಾರೆಯರು, ಕ್ರೀಡಾಪಟುಗಳು, ಗಣ್ಯರು ಈ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಬೇಕಿದೆ. ಯಾವುದನ್ನು ಪ್ರಚಾರ ಮಾಡಬೇಕು, ಯಾವುದು ಸುಳ್ಳು ಎನ್ನುವ ಕುರಿತು ಸರಕಾರ ಮತ್ತು ಆರೋಗ್ಯ ಇಲಾಖೆ ಕಾಲ ಕಾಲಕ್ಕೆ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ. ಅದು ಸೆಲೆಬ್ರಿಟಿಗೂ ತಲುಪಿದರೆ, ಅವರು ಅದನ್ನು ತಮ್ಮ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಲು ಅನುಕೂಲ ಆಗುತ್ತವೆ. ಟಾಪ್ ಸಿಲೆಬ್ರಿಟಿಗಳನ್ನು ಆಯ್ಕೆ ಮಾಡಿಕೊಂಡು ದಿನವೂ ಸರಕಾರ ಅವರಿಂದ ಜಾಗೃತಿ ಕೆಲಸ ಮಾಡಲು ಗೋದ್ರಾ ಸಿನಿಮಾ ಟೀಮ್ ವಿನಂತಿಸಿದೆ.