ಅನರ್ಹರ ತಲೆ ಸರಿ ಇಲ್ಲ: ರಮೇಶಕುಮಾರ

ಲೋಕದರ್ಶನ ವರದಿ

ಅಥಣಿ 28: ಅನರ್ಹರ ತಲೆ ಸರಿ ಇಲ್ಲ, ಅವರನ್ನು ಯಾರಾದರೂ ಹುಚ್ಚರ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಮಾಜಿ ಸ್ಪೀಕರ ಶಾಸಕ ರಮೇಶಕುಮಾರ ಹೇಳಿದರು. ಅವರು ಅಥಣಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟನಲ್ಲೂ ಸಹ ಅನರ್ಹರು ಎಂದು ಹೇಳಿದರೂ ಸಹ ತಾವು ಅರ್ಹರು ಎಂದು ಹೇಳಿಕೊಳ್ಳುತ್ತಿದ್ದಾರೆ, ಈ ಹುಚ್ಚಾಟದಿಂದಾಗಿಯೇ ಅವರನ್ನು ಹುಚ್ಚಾಸ್ಪತ್ರೆಗೆ ಭರ್ತಿಮಾಡಲು ಹೇಳಿದ್ದು ಎಂದು ವ್ಯಂಗ್ಯವಾಗಿ ಹೇಳಿದರು.

         ನಾನು ವ್ಯಕ್ತಿಗತವಾಗಿ ಅವರನ್ನು ಅನರ್ಹಗೊಳಿಸಿಲ್ಲ, ನಾನು ಒಬ್ಬ ಸ್ಪೀಕರ್ ಆಗಿ ನನ್ನ ಕರ್ತವ್ಯ ಮಾಡಿದ್ದೇನೆ. ಸಂವಿಧಾನಾತ್ಮಕವಾಗಿ ಅವರನ್ನು ಅನರ್ಹರು ಎಂದು ಘೋಷಣೆ ಮಾಡಿದ್ದೇನೆ, ಇದನ್ನು ಸುಪ್ರಿಂ ಕೋರ್ಟ ಸಹ ಎತ್ತಿ ಹಿಡದಿದೆ. ಅವರು ಅನರ್ಹರು ಎಂದು ಹೇಳಿದ್ದು ಯಾವುದೇ ಒತ್ತಡಕ್ಕೆ ಮಣಿದು ಅಲ್ಲ, ಶಾಸನದಂತೆ ಬದ್ಧವಾಗಿ ಅವರು ನಡೆದುಕೊಳ್ಳಬೇಕಿತ್ತು ಅವರು ಅದರಂತೆ ನಡೆದುಕೊಳ್ಳಲಿಲ್ಲ ಅದಕ್ಕಾಗಿಯೇ ಅನರ್ಹಗೊಳಿಸಬೇಕಾಯಿತು ಎಂದ ಅವರು ಶಾಸಕರಾಗಿ ವರ್ಷವೂ ಆಗಿಲ್ಲ, ಸಂವಿಧಾನದ ಬಗೆಗೆ ತಿಳಿದುಕೊಂಡು ಮಾತನಾಡಲಿ ಎಂದರು.

           ನಾನು ನೀಡಿದ ತೀರ್ಪು  ಸರಿಯಾಗಿದ್ದಾ ಎಂದು ತೊರುಗಾಡಿ ಜನರನ್ನು ಕೇಳುತ್ತಿದ್ದೇನೆ, ಜನರು ಸರಿಯಾಗಿದೆ ಎಂದು ಹೇಳುತ್ತಿದ್ದಾರೆ. ಸಂವಿಧಾನದ ಪಾವಿತ್ರ್ಯತೆಗೆ ಧಕ್ಕೆ ತಂದ ಅನರ್ಹರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಆದ್ದರಿಂದ ಇದು ಅನರ್ಹರು ಮತ್ತು ಇನ್ನೊಬ್ಬ ಪಕ್ಷದ ಅಭ್ಯರ್ಥಿಯ ನಡುವೆ ನಡೆಯುವಂತಹ ಚುನಾವಣೆಯಲ್ಲ, ಇದು ಸಂವಿಧಾನ ಉಳಿಯಬೇಕಾ ಹೋಗಬೇಕಾ ಎನ್ನುವುದನ್ನು ನಿರ್ಣಯಿಸುವ ಚುನಾವಣೆ ಎಂದರು.